ಕ್ರಿಕೆಟಿಗ ಶಿಖರ್ ಧವನ್ ವಿರುದ್ಧ ಅವಹೇಳನಕಾರಿ ವಿಚಾರಗಳನ್ನು ಹಾಗೂ ಅವರ ಪ್ರತಿಷ್ಠೆಗೆ ಕಳಂಕ ತರುವಂತಹ ಯಾವುದೇ ಸಂಗತಿಗಳನ್ನು ಪತ್ರಿಕೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸದಂತೆ ಇಲ್ಲವೇ ಸ್ನೇಹಿತರು, ಸಂಬಂಧಿಕರು ಅಥವಾ ಯಾವುದೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಅವರ ಪರಿತ್ಯಕ್ತ ಪತ್ನಿ ಆಶಾ ಮುಖರ್ಜಿ ಅವರಿಗೆ ನವದೆಹಲಿಯ ಕೌಟುಂಬಿಕ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದೆ [ಶಿಖರ್ ಧವನ್ ಮತ್ತು ಆಶಾ ಧವನ್ ನಡುವಣ ಪ್ರಕರಣ].
ಆಸ್ಟ್ರೇಲಿಯಾ ಪ್ರಜೆಯಾದ ಆಶಾ ಅವರು ತಮ್ಮ ಅಹವಾಲುಗಳನ್ನು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳೆದುರು ಮಾತ್ರ ಹೇಳಿಕೊಳ್ಳುವಂತೆ ಪಟಿಯಾಲ ಹೌಸ್ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ತಿಳಿಸಿದ್ದಾರೆ. ನ್ಯಾಯಾಲಯದ ಮುಂದಿನ ಆದೇಶದವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.
“ವ್ಯಕ್ತಿಯ ಪ್ರತಿಷ್ಠೆ ಎಂಬುದು ಎಲ್ಲರಿಗೂ ಪ್ರಿಯವಾದುದಾಗಿದ್ದು ಅದನ್ನು ಅತ್ಯುನ್ನತ ಆಸ್ತಿಯೆಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ಭೌತಿಕ ಆಸ್ತಿ ಕಳೆದುಕೊಂಡ ನಂತರ ಮತ್ತೆ ಪಡೆಯಬಹುದಾದರೂ ಒಮ್ಮೆ ಖ್ಯಾತಿಗೆ ಧಕ್ಕೆ ಒದಗಿದರೆ ಮರಳಿ ಪಡೆಯಲಾಗದು. ಆದ್ದರಿಂದ ಅದಕ್ಕೆ ರಕ್ಷಣೆ ನೀಡಬೇಕಿದೆ. ಆದರೆ ಯಾರಿಗಾದರೂ ಮತ್ತೊಬ್ಬರ ವಿರುದ್ಧ ಅಹವಾಲುಗಳಿದ್ದರೆ ಆತ ಅಥವಾ ಆಕೆ ದೂರುಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸುವುದನ್ನು ತಡೆಯುವಂತಿಲ್ಲ” ಎಂದು ಫೆಬ್ರವರಿ 1ರಂದು ನೀಡಿದ ಆದೇಶದಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ತನ್ನ ಸ್ನೇಹಿತರು, ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಹಾಗೂ ಐಪಿಎಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ತನ್ನ ವಿರುದ್ಧದ ಮಾನಹಾನಿಕರ ಮಾಹಿತಿಗಳನ್ನು ಪತ್ನಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಧವನ್ ದೂರಿದ್ದರು. ಶಿಖರ್- ಆಶಾ ದಾಂಪತ್ಯದಿಂದ ಒಬ್ಬಮಗ ಜನಿಸಿದ್ದು ಅಪ್ರಾಪ್ತ ವಯಸ್ಕನಾಗಿರುವ ಆತ ಆಸ್ಟ್ರೇಲಿಯಾದಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ.