Navneet kalra, Delhi Police
Navneet kalra, Delhi Police 
ಸುದ್ದಿಗಳು

ಪೊಲೀಸರೂ ನನ್ನಿಂದ ಆಮ್ಲಜನಕ ಸಾಂದ್ರಕ ಪಡೆದಿದ್ದಾರೆ: ನ್ಯಾಯಾಲಯದ ಮುಂದೆ ಉದ್ಯಮಿ ಕಲ್ರಾ ಹೇಳಿಕೆ

Bar & Bench

ದುಬಾರಿ ಬೆಲೆಗೆ ಆಮ್ಲಜನಕ ಸಾಂದ್ರಕ ಮಾರಾಟ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ನವನೀತ್‌ ಕಲ್ರಾ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ಶನಿವಾರ ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

“ಕಲ್ರಾ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡುವ ಅಗತ್ಯವಿಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯವಾಗಿದೆ” ಎಂದು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ವಸುಂಧರಾ ಆಜಾದ್‌ ಆದೇಶದಲ್ಲಿ ತಿಳಿಸಿದ್ದಾರೆ. ಕಲ್ರಾ ಜಾಮೀನು ಮನವಿಯ ವಿಚಾರಣೆಯು ಮೇ 25ರ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಗುರುಗ್ರಾಮದಲ್ಲಿರುವ ಅವರ ಭಾವ ಮೈದುನನ ಫಾರ್ಮ್‌ ಹೌಸ್‌ನಲ್ಲಿ ಕಲ್ರಾ ಅವರನ್ನು ಮೇ 16ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಮೂರು ದಿನಗಳ ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತ್ತು.

ಕಲ್ರಾ ಅವರ ಮೊಬೈಲ್‌ ಫೋನ್‌ ದತ್ತಾಂಶ ಮತ್ತು ಬ್ಯಾಂಕ್‌ ಖಾತೆ ದಾಖಲೆ ಲಭ್ಯವಾಗಿದ್ದು, ಆ ವಿಚಾರದಲ್ಲಿ ಅವರನ್ನು ಪ್ರಶ್ನಿಸಿಬೇಕಿರುವುದರಿಂದ ಅವರನ್ನು ಪೊಲೀಸ್‌ ವಶಕ್ಕೆ ನೀಡಬೇಕು ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ (ಎಪಿಪಿ) ಅತುಲ್‌ ಶ್ರೀವಾಸ್ತವ್‌ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಕೋರಿದರು. “ಆರೋಪಿಯ ಮೊಬೈಲ್‌ ವಿವರದ ವಿಚಾರವಾಗಿ ಅವರನ್ನು ಪ್ರಶ್ನಿಸಲು ಆರಂಭದಿಂದಲೂ ನಾವು ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ಕೋರುತ್ತಿದ್ದೇವೆ. ಪೂರೈಸಲಾದ ಸಾಂದ್ರಕಗಳು ಕಾರ್ಯನಿರ್ವಹಿಸದಿರುವುದರಿಂದ ಹಣ ವಾಪಸ್‌ ಮಾಡುವಂತೆ ಕೆಲವರು ಕೋರಿರುವ ವಾಟ್ಸಾಪ್‌ ಸ್ಕ್ರೀನ್‌ಶಾಟ್‌ಗಳು ನಮ್ಮ ಬಳಿ ಇವೆ” ಎಂದರು.

ಕಲ್ರಾ ಅವರಿಂದ ವಶಪಡಿಸಿಕೊಳ್ಳಲಾದ ಆಮ್ಲಜನಕ ಸಾಂದ್ರಕಗಳು ಉಪಯೋಗಕ್ಕೆ ಅರ್ಹವಾಗಿಲ್ಲ ಎಂದು ಏಮ್ಸ್‌ ವೈದ್ಯರು ಪರಿಶೀಲಿಸಿ ತಜ್ಞ ಅಭಿಪ್ರಾಯ ನೀಡಿದ್ದಾರೆ ಎಂದು ಎಪಿಪಿ ಹೇಳಿದರು.

ಎಪಿಪಿ ವಾದಕ್ಕೆ ಕಲ್ರಾ ಪರ ವಕೀಲ ವಿನೀತ್‌ ಮಲ್ಹೋತ್ರಾ ವಿರೋಧ ವ್ಯಕ್ತಪಡಿಸಿ, “ಆಮ್ಲಜನಕ ಸಾಂದ್ರಕಗಳನ್ನು ಕಲ್ರಾ ಅವರು ಉತ್ಪಾದಿಸುವುದಿಲ್ಲ ಅಥವಾ ಅವುಗಳನ್ನು ಅವರು ಆಮದು ಮಾಡಿಕೊಂಡಿಲ್ಲ. ಮ್ಯಾಟ್ರಿಕ್ಸ್‌ ಸಂಸ್ಥೆಯಿಂದ 700 ಸಾಂದ್ರಕಗಳನ್ನು ಖರೀದಿಸಿದ್ದು, ಅವುಗಳನ್ನು ಸ್ನೇಹಿತರು, ಸಂಬಂಧಿಕರು ಮತ್ತು ಗ್ರಾಹಕರಿಗೆ ನೀಡುವ ಉದ್ದೇಶದಿಂದ ತಮ್ಮ ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದರು” ಎಂದು ಸಮರ್ಥಿಸಿದರು.

ಬಂಧನಕ್ಕೂ ಪೂರ್ವದಲ್ಲಿ ಸ್ವಯಂಪ್ರೇರಿತವಾಗಿ ಕಲ್ರಾ ತಮ್ಮ ಬ್ಯಾಂಕ್‌ ಖಾತೆ ವಿವರವನ್ನು ಪೊಲೀಸರಿಗೆ ನೀಡಿದ್ದಾರೆ. ಕಲ್ರಾ ಅವರಿಂದ ವಶಪಡಿಸಿಕೊಂಡ ಸಾಂದ್ರಕಗಳ ಪೈಕಿ 450 ಅನ್ನು ಪೊಲೀಸರು ಕೋವಿಡ್‌ ಶುಶ್ರೂಷೆ ಕೇಂದ್ರಗಳಿಗೆ ವಿತರಿಸಿದ್ದಾರೆ ಎಂದು ಮಲ್ಹೋತ್ರಾ ಹೇಳುವ ಮೂಲಕ ಕಲ್ರಾ ಬಳಿ ಇದ್ದ ಆಮ್ಲಜನಕ ಸಾಂದ್ರಕಗಳು ಬಳಕೆಗೆ ಅಯೋಗ್ಯ ಎಂಬ ಆರೋಪವನ್ನು ನಿರಾಕರಿಸಿದರು.

“ಇದೇ ಆಮ್ಲಜನಕ ಸಾಂದ್ರಕಗಳನ್ನು ಮ್ಯಾಟ್ರಿಕ್ಸ್‌ ಸಂಸ್ಥೆಯು ಸ್ಪೈಸ್‌ಜೆಟ್‌ ಏರ್‌ಲೈನ್‌ಗೆ ಮಾರಾಟ ಮಾಡಿದೆ. ಇದೇ ಬ್ರ್ಯಾಂಡ್‌ನ 250 ಸಾಂದ್ರಕಗಳನ್ನು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಖರೀದಿಸಿದ್ದಾರೆ” ಎಂದು ಮಲ್ಹೋತ್ರಾ ವಾದಿಸಿದ್ದು, ಕಲ್ರಾ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದರು. ಇದಲ್ಲದೆ, ಸಾಂದ್ರಕಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ನಿರೂಪಣೆ ಇಲ್ಲ. ಅದರಲ್ಲಿ ಸೂಚಿಸಲಾಗಿರುವ ಪ್ರಮಾಣದ ಆಮ್ಲಜನಕವನ್ನು ಅವು ನೀಡುತ್ತಿವೆ ಎಂದು ಮಲ್ಹೋತ್ರಾ ಹೇಳಿದರು.

ಈ ಸಂದರ್ಭದಲ್ಲಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದ ಕಲ್ರಾ ಅವರಿಗೆ ಮಾತನಾಡಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿತು. “ಪೊಲೀಸರೂ ನನ್ನಿಂದ ಸಾಂದ್ರಕಗಳನ್ನು ಪಡೆದುಕೊಂಡಿದ್ದಾರೆ. ಈ ಯಂತ್ರಗಳನ್ನು ನಾನು ಉತ್ಪಾದಿಸುವುದಿಲ್ಲ ಅಥವಾ ಆಮದು ಮಾಡಿಕೊಳ್ಳುತ್ತಿಲ್ಲ. ನನ್ನಿಂದ ಖರೀದಿಸಲಾದ ಯಂತ್ರಗಳಿಂದ ಸಾಕಷ್ಟು ಜೀವ ಉಳಿದಿವೆ ಎಂಬ ಹಲವು ಸಂದೇಶಗಳು ನನ್ನ ಬಳಿ ಇವೆ. ಅಷ್ಟೇ ಅಲ್ಲದೆ, ದೋಷವಿದ್ದ ನಾಲ್ಕೈದು ಯಂತ್ರಗಳನ್ನು ಬದಲಿಸಿಯೂ ಕೊಟ್ಟಿದ್ದೇನೆ” ಎಂದು ಕಲ್ರಾ ಗದ್ಗದಿತರಾದರು.

ಎಪಿಪಿ ಶ್ರೀವಾಸ್ತವ್‌ ಅವರು ನನ್ನ ಫೋನಿನಲ್ಲಿರುವ ಸಕಾರಾತ್ಮಕ ಸಂದೇಶಗಳ ಬಗ್ಗೆ ಏಕೆ ಮಾತನಾಡುವುದಿಲ್ಲ. ಬದಲಿಗೆ ಹಳೆಯ ಸಂದೇಶಗಳನ್ನೇ ಏಕೆ ಉಲ್ಲೇಖಿಸುತ್ತಾರೆ ಎಂದು ಕಲ್ರಾ ಪ್ರಶ್ನಿಸಿದರು. ಅಂತಿಮವಾಗಿ ಕಲ್ರಾ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲು ನಿರಾಕರಿಸಿದ ಪೀಠವು ಅವರ ಜಾಮೀನು ಮನವಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.