ಆಮ್ಲಜನಕ ಸಾಂದ್ರಕ ಅಕ್ರಮ ದಾಸ್ತಾನು ಪ್ರಕರಣ: ಉದ್ಯಮಿ ನವನೀತ್ ಕಲ್ರಾ ಬಂಧನ

ಆಮ್ಲಜನಕ ಸಾಂದ್ರಕ ಅಕ್ರಮ ದಾಸ್ತಾನು ಪ್ರಕರಣ: ಉದ್ಯಮಿ ನವನೀತ್ ಕಲ್ರಾ ಬಂಧನ

ಕಲ್ರಾ ಅವರು ಗುರುಗ್ರಾಮದ ತಮ್ಮ ಭಾವಮೈದುನನ ತೋಟದ ಮನೆಯಲ್ಲಿ ಸೆರೆ ಸಿಕ್ಕಿದ್ದಾರೆ.
Published on

ಆಮ್ಲಜನಕ ಸಾಂದ್ರಕ ಕಾಳ ದಾಸ್ತಾನು ಪ್ರಕರಣದಲ್ಲಿ ದೆಹಲಿಯ ಉದ್ಯಮಿ ನವನೀತ್‌ ಕಲ್ರಾ ಅವರನ್ನು ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಕಲ್ರಾ ಅವರನ್ನು ಗುರುಗ್ರಾಮದ ತಮ್ಮ ಭಾವಮೈದುನನ ತೋಟದ ಮನೆಯಿಂದ ಬಂಧಿಸಲಾಗಿದೆ.

ದೆಹಲಿ ಪೊಲೀಸರು ನಡೆಸುತ್ತಿರುವ ಆಮ್ಲಜನಕ ಸಾಂದ್ರಕ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿತ್ತು. ಇದೇ ವೇಳೆ ಕಲ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮೇ 18 ಕ್ಕೆ ಮುಂದೂಡಿದೆ.

ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು "ಆಮ್ಲಜನಕ ಸಾಂದ್ರತೆಯ ಬೆಲೆಗೆ ಸರ್ಕಾರ ಇನ್ನೂ ನಿಯಂತ್ರಣ ವಿಧಿಸದೇ ಇರುವುದರಿಂದ ಕಲ್ರಾ ಅವರು ಅಗತ್ಯ ಸರಕುಗಳ ಕಾಯಿದೆ ಉಲ್ಲಂಘಿಸಿದ್ದಾರೆ ಎನ್ನಲಾಗದು" ಎಂದು ವಾದಿಸಿದ್ದರು.

ದೆಹಲಿ ಪೊಲೀಸರು ನವನೀತ್ ಕಲ್ರಾ ಒಡೆತನದ 'ಖಾನ್ ಚಾಚಾ' ಮತ್ತಿತರ ರೆಸ್ಟೋರೆಂಟ್‌ಗಳಿಂದ ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದ್ದಾಗಿ ವರದಿಯಾಗಿತ್ತು. ಕೋವಿಡ್‌ ಬಿಕ್ಕಟ್ಟಿನ ವೇಳೆ ಆಮದು ಮಾಡಿಕೊಂಡ ಸಾಂದ್ರಕಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದರು.

Also Read
[ಆಮ್ಲಜನಕ ಸಾಂದ್ರಕ ಮುಟ್ಟುಗೋಲು] ವ್ಯಾಪಾರ ಮಾಡುವುದು ಅಪರಾಧವೇ? ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಬಳಿಕ ಪೊಲೀಸರು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದರು. ಸಾಂದ್ರಕಗಳನ್ನು ವಶಪಡಿಸಿಕೊಂಡ ಸಂದರ್ಭದಿಂದಲೂ ತಲೆಮರೆಸಿಕೊಂಡಿದ್ದ ಕಲ್ರಾ ಅವರಿಗೆ ಲುಕೌಟ್‌ ನೋಟಿಸ್‌ ನೀಡಲಾಗಿತ್ತು.

Kannada Bar & Bench
kannada.barandbench.com