Jacqueline Fernandez
Jacqueline Fernandez  Instagram
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

Bar & Bench

ವಂಚನೆ ಪ್ರಕರಣಗಳಲ್ಲಿ ಬಂಧಿತನಾಗಿರುವ ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ಪ್ರಮುಖ ಆರೋಪಿಯಾಗಿರುವ  ₹200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ದೆಹಲಿ ನ್ಯಾಯಾಲಯವೊಂದು ಮಂಗಳವಾರ ಜಾಮೀನು ನೀಡಿದೆ.

ನಟಿಯ ಮನವಿಯನ್ನು ಪುರಸ್ಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ₹2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಒಬ್ಬರ ಭದ್ರತೆಯ ಆಧಾರದ ಮೇಲೆ ಜಾಮೀನು ನೀಡಿದರು.  

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆ ನಟಿ ಜಾಕ್ವೆಲಿನ್‌ ಅವರನ್ನು ಬಂಧಿಸಿರಲಿಲ್ಲ. ಹಾಗಾಗಿ, ಅವರಿಗೆ ಜಾಮೀನು ನೀಡಲು ಅಡ್ಡಿಯಿಲ್ಲ ಎಂದು ಆಕೆಯ ಪರ ವಕೀಲರಾದ ಪ್ರಶಾಂತ್ ಪಾಟೀಲ್ ಮತ್ತು ಅಮನ್ ನಂದ್ರಜೋಗ್ ವಾದಿಸಿದ್ದರು. ನ್ಯಾಯಾಲಯವು ಅವರಿಗೆ ಸೆಪ್ಟೆಂಬರ್ 26 ರಂದು ₹ 50,000 ಬಾಂಡ್‌ ಮೊತ್ತದ ಭದ್ರತೆಯೊಂದಿಗೆ ಮಧ್ಯಂತರ ಜಾಮೀನು ನೀಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 17 ರಂದು ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಪೂರಕ ಆರೋಪ ಪಟ್ಟಿ ಆಧರಿಸಿ ಆಗಸ್ಟ್ 31 ರಂದು ನ್ಯಾಯಾಲಯ ಜಾಕ್ವೆಲಿನ್‌ ಅವರಿಗೆ ಸಮನ್ಸ್‌ ನೀಡಿತ್ತು. ನಂತರ ನ್ಯಾಯಾಲಯಕ್ಕೆ ಹಾಜರಾಗುವಂತೆ ನಟಿಗೆ ಸೂಚಿಸಲಾಗಿತ್ತು. ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ ಉಳಿದ ಆರೋಪಿಗಳ ಹೆಸರನ್ನು ಉಲ್ಲೇಖಿಸಿದ ಕೆಲಕಾಲದ ಬಳಿಕ ಆಕೆಯ ಹೆಸರು ಪ್ರಸ್ತಾಪಿಸಿತ್ತು.

ಜಾರಿ ನಿರ್ದೇಶನಾಲಯದ ಪ್ರಕಾರ, ಸುಕೇಶ್‌ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ವತ್ತೊಂದರಲ್ಲಿ ಶೋಧ ನಡೆಸಿದಾಗ, ಸಹ ಆರೋಪಿ ಲೀನಾ ಪೌಲೋಸ್ ಮತ್ತಿತರರಿಗೆ ಸೇರಿದ 16 ಐಷಾರಾಮಿ ವಾಹನಗಳು ಪತ್ತೆಯಾಗಿದ್ದವು. ₹ 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚಂದ್ರಶೇಖರ್, ಲೀನಾ ಮರಿಯಾ ಪೌಲ್, ದೀಪಕ್ ರಾಮನಾನಿ, ಪ್ರದೀಪ್ ರಾಮನಾನಿ, ಕಮಲೇಶ್ ಕೊಠಾರಿ, ಅವತಾರ್ ಸಿಂಗ್ ಕೊಚ್ಚಾರ್ ಸೇರಿದಂತೆ 8 ಆರೋಪಿಗಳನ್ನು ಈ ಹಿಂದೆ ಸಲ್ಲಿಸಲಾಗಿದ್ದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ತನ್ನ ಪಾಸ್‌ಪೋರ್ಟ್ ಮರಳಿಸುವಂತೆ ಕೋರಿ ಜಾಕ್ವೆಲಿನ್‌ ಅವರು ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ, 2009 ರಿಂದ ತಾನು ಭಾರತದಲ್ಲಿ ವಾಸಿಸುತ್ತಿದ್ದು ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದಾಗಿ  ಹೇಳಿದ್ದರು. ಪ್ರಕರಣದಲ್ಲಿ ತನಿಖಾ ಸಂಸ್ಥೆ ತನ್ನನ್ನು ಆರೋಪಿ ಎಂದು ಹೆಸರಿಸದಿದ್ದರೂ ವಿನಾ ಕಾರಣ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ದೂರಿದ್ದರು.