Medha Patkar and VK Saxena  facebook and x.com
ಸುದ್ದಿಗಳು

ಮಾನಹಾನಿ ಪ್ರಕರಣ: ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ 5 ತಿಂಗಳ ಸಜೆ ವಿಧಿಸಿದ ದೆಹಲಿ ನ್ಯಾಯಾಲಯ

ಬಿಲ್‌ಗೇಟ್ಸ್‌ ತರಹದ ಬಂಡವಾಳಿಗರಿಗೆ ಗುಜರಾತ್ ಜನತೆ ಮತ್ತು ಅವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ ಎಂದು ಮೇಧಾ ಆರೋಪಿಸಿದ್ದರು. ಈ ಸಂಬಂಧ ಹೂಡಿದ್ದ ಪ್ರಕರಣದಲ್ಲಿ ಮೇಧಾ ದೋಷಿ ಎಂದು ತೀರ್ಪು ನೀಡಲಾಗಿತ್ತು.

Bar & Bench

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2001ರಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಆದರೆ ಆದೇಶವನ್ನು 30 ದಿನಗಳವರೆಗೆ ಅಮಾನತಿನಲ್ಲಿ ಇರಿಸಲಾಗುವುದು ಎಂದು ಸಾಕೇತ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಹೇಳಿದ್ದಾರೆ.

ಪಾಟ್ಕರ್ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಒಂದು ಅಥವಾ ಎರಡು ವರ್ಷಗಳಷ್ಟು ಅಧಿಕ ಶಿಕ್ಷೆಯನ್ನು ವಿಧಿಸಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮೇಧಾ ಅವರು ಸಕ್ಸೇನಾ ಅವರಿಗೆ  ₹10 ಲಕ್ಷ ಪರಿಹಾರ ನೀಡುವಂತೆ  ಮೇ 24ರಂದು ನ್ಯಾಯಾಲಯ ತೀರ್ಪು ನೀಡಿತ್ತು.

ನರ್ಮದಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಮೇಧಾ ಅವರು ಸಂಘಟಿಸಿದ್ದ ನರ್ಮದಾ ಬಚಾವೋ ಆಂದೋಲನದ ವಿರುದ್ಧ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಸಂಘಟನೆಯ ಅಧ್ಯಕ್ಷರಾಗಿದ್ದ ಸಕ್ಸೇನಾ ಅವರು 2000ನೇ ಇಸವಿಯಲ್ಲಿ ಜಾಹೀರಾತು ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ಮೇಧಾ ಅವರು ಸಕ್ಸೇನಾ ಅವರ ವಿರುದ್ಧ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದರಲ್ಲಿ ಮಾಡಲಾದ ಆರೊಪಗಳನ್ನು ಆಧರಿಸಿ ಸಕ್ಸೇನಾ 2001ರಲ್ಲಿ ಅಹಮದಾಬಾದ್‌ನ ನ್ಯಾಯಾಲಯದಲ್ಲಿ ಮೇಧಾ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಪ್ರಕರಣವನ್ನು 2003ರಲ್ಲಿ ದೆಹಲಿಗೆ ವರ್ಗಾಯಿಸಲಾಗಿತ್ತು.

ಮೇಧಾ ಅವರನ್ನು ಪ್ರಕರಣದ ತಪ್ಪಿತಸ್ಥೆ ಎಂದು ಪರಿಗಣಿಸಿ ಮೇ ತಿಂಗಳಿನಲ್ಲಿ ನೀಡಿದ್ದ ತೀರ್ಪಿನಲ್ಲಿ ನ್ಯಾಯಾಧೀಶ ಶರ್ಮಾ ಅವರು ಬಿಲ್‌ಗೇಟ್ಸ್‌ ಮತ್ತು ವುಲ್ಫೆನ್‌ಸೋನ್‌ ಅವರಿಗೆ ಗುಜರಾತ್‌ ಜನತೆ ಮತ್ತು ಅವರ ಸಂಪನ್ಮೂಲಗಳನ್ನು ಸಕ್ಸೇನಾ ಅಡವಿಟ್ಟಿದ್ದಾರೆ. ಅವರು ಗುಜರಾತ್‌ ಸರ್ಕಾರದ ಏಜೆಂಟ್‌ ಎಂಬುದಾಗಿ ಮೇಧಾ ಆರೋಪಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಆಕೆ ಉದ್ದೇಶಪೂರ್ವಕವಾಗಿ ಮತ್ತು ಲೆಕ್ಕಚಾರದಿಂದ ತನ್ನ ಪತ್ರಿಕಾ ಟಿಪ್ಪಣಿಯ ಮೂಲಕ ದೂರುದಾರರನ್ನು ಅವಹೇಳನ ಮಾಡುವ ಸ್ಪಷ್ಟ ಉದ್ದೇಶ ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದರು.

ಸಕ್ಸೇನಾ ಅವರು "ಹವಾಲಾ ವಹಿವಾಟುಗಳಿಂದ ನೋವು ಅನುಭವಿಸಿದ್ದಾರೆ" ಎಂದು "ಸ್ಪಷ್ಟವಾಗಿ" ಹೇಳುವ ಮೂಲಕ ಮೇಧಾ ಅವರು ಸಕ್ಸೇನಾ ಅವರನ್ನು ಕಾನೂನುಬಾಹಿರ ಮತ್ತು ಅನೈತಿಕ ಹಣಕಾಸು ವ್ಯವಹಾರಗಳೊಂದಿಗೆ ತಳಕು ಹಾಕುವ ಗುರಿ ಹೊಂದಿದ್ದರು. ಇದು ಅವರ ಖ್ಯಾತಿ ಮತ್ತು ಸ್ಥಾನಕ್ಕೆ ಗಮನಾರ್ಹ ಹಾನಿ ಉಂಟುಮಾಡಿದೆ ಎಂದು ತೀರ್ಪು ವಿವರಿಸಿದೆ.

ತಮ್ಮ ಆಪಾದನೆಗಳ ಕುರಿತು ವಸ್ತುನಿಷ್ಠ ಪುರಾವೆಗಳನ್ನು ನೀಡದೆ ಸಕ್ಸೇನಾ ಅವರ ಹಣಕಾಸು ಪ್ರಾಮಾಣಿಕತೆಯನ್ನು ಹಾಳುಮಾಡುವ ಸ್ಪಷ್ಟ ಯತ್ನ ಇಲ್ಲಿ ನಡೆದಿದ್ದು ಅಕ್ರಮ ನಡೆದಿದೆ ಎಂಬುದಾಗಿ ಸಾರ್ವಜನಿಕ ಅಭಿಪ್ರಾಯ ಹುಟ್ಟುಹಾಕುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು.