Neelesh Misra, Hindustan Times & Saket Court Facebook
ಸುದ್ದಿಗಳು

ಮಾನನಷ್ಟ ಮೊಕದ್ದಮೆ: ₹40 ಲಕ್ಷ ಪರಿಹಾರ ನೀಡಲು ಹಿಂದೂಸ್ತಾನ್ ಟೈಮ್ಸ್, ಮಾಜಿ ವರದಿಗಾರನಿಗೆ ದೆಹಲಿ ನ್ಯಾಯಾಲಯ ಆದೇಶ

ಇನ್ನು 60 ದಿನಗಳ ಒಳಗೆ ಕ್ಷಮಾಪಣೆ ಹೇಳಿಕೆ ಪ್ರಕಟಿಸುವಂತೆ ನ್ಯಾಯಾಲಯ ಪತ್ರಿಕೆಗೆ ಇದೇ ವೇಳೆ ಆದೇಶಿಸಿತು.

Bar & Bench

ಹಣಕಾಸು ಅಕ್ರಮ ಎಸಗಿದ್ದರಿಂದ ಕಂಪೆನಿಯಿಂದ ಉದ್ಯಮಿಯೊಬ್ಬರು ವಜಾಗೊಂಡಿದ್ದಾರೆ ಎಂದು ಸುದ್ದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಉದ್ಯಮಿ ಹೂಡಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಪತ್ರಿಕೆ ಹಿಂದೂಸ್ತಾನ್ ಟೈಮ್ಸ್ ಹಾಗೂ ಅದರ ಮಾಜಿ ವರದಿಗಾರ ನೀಲೇಶ್‌ ಮಿಶ್ರಾ ಅವರು ಉದ್ಯಮಿಗೆ ₹40 ಲಕ್ಷ ಪರಿಹಾರ ನೀಡಬೇಕು ಎಂದು ದೆಹಲಿಯ ನ್ಯಾಯಾಲಯವೊಂದು ಈಚೆಗೆ ಆದೇಶಿಸಿದೆ.

ಡಾರ್ಟ್ಸ್ ಐಟಿ ನೆಟ್‌ವರ್ಕ್‌ನ ಸಂಸ್ಥಾಪಕ ಅರುಣ್ ಕುಮಾರ್ ಗುಪ್ತಾ ಅವರಿಗೆ ಪರಿಹಾರ ಮೊತ್ತದ ಮುಕ್ಕಾಲು ಪಾಲನ್ನು ಪತ್ರಿಕೆ ನೀಡಬೇಕು ಉಳಿದದ್ದನ್ನು ಮಿಶ್ರಾ ಅವರು ನೀಡಬೇಕು ಎಂದು ಜಿಲ್ಲಾ ನ್ಯಾಯಾಧೀಶ ಪ್ರಭ್ ದೀಪ್ ಕೌರ್ ಅವರು ಆದೇಶಿಸಿದರು.

ಇನ್ನು 60 ದಿನಗಳ ಒಳಗೆ ಕ್ಷಮಾಪಣೆ ಹೇಳಿಕೆ ಪ್ರಕಟಿಸುವಂತೆ ನ್ಯಾಯಾಲಯ  ಪತ್ರಿಕೆಗೆ ಇದೇ ವೇಳೆ ಆದೇಶಿಸಿತು. ಜೊತೆಗೆ ಭವಿಷ್ಯದಲ್ಲಿ ಗುಪ್ತಾ ಅವರ ಮಾನಹಾನಿ ಮಾಡದಂತೆ ಪತ್ರಿಕೆಗೆ ಶಾಶ್ವತವಾಗಿ ನಿರ್ಬಂಧ ವಿಧಿಸಿತು.

ಆರ್ಥಿಕ ಅಕ್ರಮಗಳ ಕಾರಣಕ್ಕೆ ಗುಪ್ತಾ ಅವರನ್ನು ವಜಾಗೊಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಗುಪ್ತಾ ಅವರನ್ನು ಆರ್ಥಿಕ ಅಕ್ರಮಗಳಿಗಾಗಿ ವಜಾಗೊಳಿಸಲಾಗಿದೆ ಎಂದು ಸೂಚಿಸಲು ಯಾವುದೇ ದಾಖಲೆಗಳನ್ನು ಪತ್ರಿಕೆ ಮತ್ತು ವರದಿಗಾರ ಸಲ್ಲಿಸಿಲ್ಲ ಎಂದು ತಿಳಿಸಿದ ನ್ಯಾಯಾಲಯ ಪತ್ರಿಕೆ ಮತ್ತು ಮಿಶ್ರಾ ಅವರು ಮಾಹಿತಿಯ ನಿಖರವಾದ ಮೂಲವನ್ನು ಬಹಿರಂಗಪಡಿಸಿಲ್ಲ ಎಂದಿತು.

ಲೇಖನದಲ್ಲಿ ಗುಪ್ತಾ ಅವರನ್ನು ನೇರವಾಗಿ ಹೆಸರಿಸಿಲ್ಲ ಎಂದು ಪತ್ರಿಕೆ ಮತ್ತು ಪತ್ರಕರ್ತ ವಾದಿಸಿದರಾದರೂ ವಿಚಾರಣೆ ನಡೆಸಿದ ಎಲ್ಲಾ ಸಾಕ್ಷಿಗಳು ನ್ಯಾಯಾಲಯದ ಪ್ರಕರಣಗಳ ಬಗ್ಗೆ ತಮಗೆ ತಿಳಿದಿದ್ದು ವರದಿಯನ್ನು ಉದ್ಯಮಿಗೆ ತಳಕು ಹಾಕಬಹುದಾಗಿದೆ ಎಂದು ಒಪ್ಪಿಕೊಂಡರು ಎಂದು ನ್ಯಾಯಾಲಯ ಹೇಳಿದರು. ಲೇಖನದ ಆರೋಪಗಳ ಕುರಿತಂತೆ ಸಾಕ್ಷಿಗಳು ಗುಪ್ತಾ ಅವರನ್ನು ಪ್ರಶ್ನಿಸಿದಾಗ ಅವರ ವರ್ಚಸ್ಸಿಗೆ ಧಕ್ಕೆ ಒದಗಿತು. ಇಂತಹ ಆಧಾರರಹಿತ ಆರೋಪ ಉದ್ಯಮಿಯ ಚಾರಿತ್ರ್ಯ ವಧೆಗೆ ಸಮ ಎಂದು ನ್ಯಾಯಾಲಯ ತಿಳಿಸಿತು.

ಮಿಶ್ರಾ ಮತ್ತು ಹಿಂದೂಸ್ತಾನ್‌ ಟೈಮ್ಸ್‌ ಅನ್ನು ಸಮಾನ ಹೊಣೆಗಾರರನ್ನಾಗಿ ಮಾಡಬಹುದಾಗಿತ್ತು. ಆದರೆ ಮಿಶ್ರಾ ಅಜಾಗರೂಕತೆಯಿಂದ ವರದಿ ಮಾಡಿರಬಹುದಾದರೂ ಪತ್ರಿಕೆಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಅದು ಹೇಳಿತು. ಆ ಮೂಲಕ ಪರಿಹಾರದ ಮುಕ್ಕಾಲು ಪಾಲನ್ನು ಪತ್ರಿಕೆ ಭರಿಸಬೇಕು ಎಂದು ಆದೇಶಿಸಿತು.