ಸುದ್ದಿಗಳು

ಜಂತರ್ ಮಂತರ್ ಮುಸ್ಲಿಂ ವಿರೋಧಿ ಘೋಷಣೆ: ಆರೋಪಿ ಪಿಂಕಿ ಚೌಧರಿಯನ್ನು ನಾಳೆಯವರೆಗೆ ಬಂಧಿಸದಂತೆ ದೆಹಲಿ ನ್ಯಾಯಾಲಯ ರಕ್ಷಣೆ

Bar & Bench

ನವದೆಹಲಿಯ ಜಂತರ್ ಮಂತರ್ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪಿಂಕಿ ಚೌಧರಿಗೆ ದೆಹಲಿ ನ್ಯಾಯಾಲಯ ಮಧ್ಯಂತರ ರಕ್ಷಣೆಯನ್ನು ನೀಡಿದೆ. ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯ ಆಗಸ್ಟ್ 16 ರವರೆಗೆ ಚೌಧರಿಗೆ ಮಧ್ಯಂತರ ರಕ್ಷಣೆಯನ್ನು ನೀಡಿತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಶುತೋಷ್ ಕುಮಾರ್ ಅವರು ಚೌಧರಿಯನ್ನು ಸೋಮವಾರದವರೆಗೆ ಬಂಧಿಸದಂತೆ ತಡೆ ನೀಡಿದರು. ಇದೇ ವೇಳೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಅಥವಾ ಸಾಕ್ಷ್ಯವನ್ನು ತಿರುಚಬಾರದು ಎಂದು ಚೌದರಿಗೆ ತಾಕೀತು ಮಾಡಿದರು.

ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಗಳಿಗೆ ಅವಿಧೇಯತೆ), 269 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕು ಹರಡುವ ನಿರ್ಲಕ್ಷ್ಯದ ಕ್ರಿಯೆ), 270 (ಜೀವಕ್ಕೆ ಮಾರಕವಾದ ಕಾಯಿಲೆಯ ಸೋಂಕು ಹರಡುವ ಸಾಧ್ಯತೆ) 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದು), 120 ಬಿ (ಕ್ರಿಮಿನಲ್ ಪಿತೂರಿ) ಅಡಿ ಪ್ರಕರಣ ದಾಖಲಿಸಲಾಗಿದೆ.

ಚೌಧರಿಯ ಉಪಸ್ಥಿತಿ ಮತ್ತು ಆತ ಹೇಳಿದ ಮಾತುಗಳನ್ನು ಒಳಗೊಂಡ ಘಟನೆಗೆ ಸಂಬಂಧಿಸಿದ ವೀಡಿಯೋ ತುಣುಕು ಒದಗಿಸುವುದಾಗಿ ವಿಚಾರಣೆ ವೇಳೆ, ಠಾಣಾಧಿಕಾರಿ ಅವರು ಒಪ್ಪಿಕೊಂಡರು. ಅಲ್ಲದೆ ವೀಡಿಯೊದ ಪ್ರತಿಲೇಖವನ್ನು (ಟ್ರಾನ್ಸ್‌ಸ್ಕ್ರಿಪ್ಟ್‌) ಕೂಡ ಒದಗಿಸುವುದಾಗಿ ತಿಳಿಸಿದರು.

ಆರೋಪಿ ಪರ ವಕೀಲರು “ಪಿಂಕಿಯ ಹೆಸರು ಎಫ್‌ಐಆರ್‌ನಲ್ಲಿ ಇಲ್ಲ. ಅವರು ಯಾವುದೇ ಕೋಮು ಪ್ರಚೋದಕ ಘೋಷಣೆ ಕೂಗಿಲ್ಲ ಅಥವಾ ಇನ್ನೊಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಲು ಯಾವುದೇ ಪದಗಳನ್ನು ಆಡಲಿಲ್ಲ”ಎಂದು ವಾದ ಮಂಡಿಸಿದರು. ಅಲ್ಲದೆ ಚೌಧರಿಗೆ ರಕ್ಷಣೆ ನೀಡುವಾಗ ನ್ಯಾಯಾಲಯ ಕಾರ್ಯಕ್ರಮದ ಮುಖ್ಯ ಸಂಘಟಕ ಅಶ್ವಿನಿ ಉಪಾಧ್ಯಾಯ ಅವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂಬ ಅಂಶವನ್ನು ಕೂಡ ಗಣನೆಗೆ ತೆಗೆದುಕೊಂಡಿತು.