ಸುದ್ದಿಗಳು

ಅಕ್ರಮ ಹಣ ವರ್ಗಾವಣೆ: 14 ದಿನಗಳ ನ್ಯಾಯಾಂಗ ಬಂಧನಕ್ಕೆ ದೆಹಲಿ ಸಚಿವ ಸತ್ಯೇಂದರ್‌ ಜೈನ್

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ, ದೆಹಲಿ ಸರ್ಕಾರದ ಸಚಿವ ಸತ್ಯೇಂದರ್‌ ಜೈನ್ ಅವರನ್ನು ದೆಹಲಿ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ದೆಹಲಿ ಸಚಿವರು ಈವರೆಗೂ ಜಾರಿ ನಿರ್ದೇಶನಾಲಯದ (ಇ ಡಿ) ವಶದಲ್ಲಿದ್ದರು. ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ ಡಿ ಅಧಿಕಾರಿಗಳು ಬಂಧಿಸಿದ್ದರು.

ಜೈನ್ ಅವರು ಆಮ್ ಆದ್ಮಿ ಪಕ್ಷದ ಹಿರಿಯ ರಾಜಕಾರಣಿಯಾಗಿದ್ದು ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಆರೋಗ್ಯ, ಗೃಹ, ವಿದ್ಯುತ್, ಲೋಕೋಪಯೋಗಿ ಇಲಾಖೆ, ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಪ್ರವಾಹ, ನೀರಾವರಿ ಮತ್ತು ಜಲ ಖಾತೆಗಳನ್ನು ಹೊಂದಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್‌ ಭಾಗಿಯಾಗಿದ್ದಾರೆ ಎಂದು ಇ ಡಿ ಆರೋಪಿಸಿದ್ದು ಇದರ ಫಲಾನುಭವಿಗಳು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಒಂದು ಬಾರಿ ಎಸಗಿರುವ ಅಪರಾಧವಂತೂ ಅಲ್ಲ ಎಂದು ಇ ಡಿ ಆರೋಪಿಸಿದೆ.

ಇ ಡಿ ವಿಚಾರಣೆ ವೇಳೆ ಜೈನ್‌ ಅವರ ವಕೀಲರು ಹಾಜರಿರಬಹುದು. ಆದರೆ ಅವರು ವಿಚಾರಣೆಯ ಮಾತುಗಳು ಕೇಳದಷ್ಟು ದೂರದಲ್ಲಿ ಇರಬೇಕು ಎಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ತಡೆಯಾಜ್ಞೆ ನೀಡಿತ್ತು. ನಾಳೆ ಬೆಳಗ್ಗೆ 11 ಗಂಟೆಗೆ ಜೈನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.