ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ವಿಚಾರಣೆ ನಡೆಸುವಾಗ ಸಚಿವರೊಂದಿಗೆ ವಕೀಲರು ಹಾಜರಿರಬೇಕು ಎಂಬ ಸಿಬಿಐ ವಿಶೇಷ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಶನಿವಾರ ತಡೆ ನೀಡಿದೆ.
ಜೈನ್ ಅವರ ವಿಚಾರಣೆ ನಡೆಯುವಾಗ ದೂರದಲ್ಲಿ ವಕೀಲರೊಬ್ಬರು ಉಪಸ್ಥಿತರಿಬೇಕು. ಅವರಿಗೆ ವಿಚಾರಣೆ ನಡೆಯುತ್ತಿರುವುದು ಕಾಣಬೇಕೆ ಹೊರತು ಕೇಳಬಾರದು ಎಂದು ಕೆಳ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.
ಆದರೆ “ಜೈನ್ ಅವರ ವಿರುದ್ಧ ಯಾವುದೇ ಎಫ್ಐಆರ್ ಅಥವಾ ದೂರು ದಾಖಲಾಗದೇ ಇರುವುದರಿಂದ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ತಮ್ಮ ವಕೀಲರು ಇರಬೇಕು ಎಂದು ಅವರು ಹಕ್ಕು ಚಲಾಯಿಸಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಮೂರ್ತಿ ಯೋಗೇಶ್ ಖನ್ನಾ ಹೇಳಿದರು.
“ಹೇಗಿದ್ದರೂ, ಅವರ ಸಂಪೂರ್ಣ ಹೇಳಿಕೆಯನ್ನು ವೀಡಿಯೊಗ್ರಫಿ ಅಥವಾ ಆಡಿಯೋಗ್ರಫಿ ಮಾಡುವುದರಿಂದ ಪ್ರತಿವಾದಿಯ ಮೇಲೆ ಯಾವುದೇ ಬಲವಂತದ, ಒತ್ತಡದ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ಅದು ತೊಡೆದು ಹಾಕುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು."