ಸುದ್ದಿಗಳು

ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಎಫ್ಐಆರ್: ನಟ ದೀಪ್ ಸಿಧುಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದ ದೆಹಲಿ ನ್ಯಾಯಾಲಯ

ಸಿಧುವನ್ನು ದೆಹಲಿ ಪೊಲೀಸರು ತಿಹಾರ್‌ ಡ್ಯೂಟಿ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದರು.

Bar & Bench

ಪ್ರತಿಭಟನಾ ನಿರತ ರೈತರು ಜನವರಿ 26 ರಂದು ಆಯೋಜಿಸಿದ್ದ ಟ್ರಾಕ್ಟರ್‌ ಮೆರವಣಿಗೆ ವೇಳೆ ಘಟಿಸಿದ ಹಿಂಸಾಚಾರದಲ್ಲಿ ಚಾರಿತ್ರಿಕ ಕೆಂಪು ಕೋಟೆಗೆ ಆದ ಹಾನಿ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪಂಜಾಬಿ ನಟ ದೀಪ್‌ ಸಿಧುಗೆ ದೆಹಲಿ ನ್ಯಾಯಾಲಯ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ.

ಸಿಧು ಅವರನ್ನು ದೆಹಲಿ ಪೊಲೀಸರು ತಿಹಾರ್‌ನ ಡ್ಯೂಟಿ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಿದರು. ಆರೋಪಿಯನ್ನು ನಾಲ್ಕು ದಿನಗಳ ಪೊಲೀಸ್‌ ವಶಕ್ಕೆ ಒಪ್ಪಿಸಬೇಕೆಂಬ ಪೊಲೀಸರ ಕೋರಿಕೆಯನ್ನು ನ್ಯಾಯಾಧೀಶರು ಇದೇ ವೇಳೆ ತಿರಸ್ಕರಿಸಿದರು. ಡ್ಯೂಟಿ ಮ್ಯಾಜಿಸ್ಟ್ರೇಟ್ ಆದೇಶದಂತೆ, ಸಿಧು ಅವರನ್ನು ನಾಳೆ (ಏ. 19) ಸಂಬಂಧಪಟ್ಟ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಿದೆ. ಸಿಧು ಪರ ವಕೀಲ ಜಶದೀಪ್‌ ದಿಲ್ಲಾನ್‌ ಅವರು ಸಿಧು ಅವರನ್ನು ವಶಕ್ಕೆ ಒಪ್ಪಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೊದಲಿಗೆ ದಾಖಲಿಸಲಾಗಿದ್ದ ಎಫ್‌ಐಆರ್‌ ಮತ್ತು ಎಎಸ್‌ಐ ದಾಖಲಿಸಿರುವ ದೂರು ಎರಡೂ ಒಂದೇ ಘಟನೆಗೆ ಸಂಬಂಧಿಸಿದ್ದಾಗಿದೆ ಎಂದು ಅವರು ವಾದಿಸಿದರು.

ಕೆಂಪುಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೀಸ್‌ ಹಜಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರು ಏಪ್ರಿಲ್ 16 ರಂದು ಸಿಧುವಿಗೆ ಜಾಮೀನು ನೀಡಿದ್ದರು. ಎಎಸ್‌ಐ ದೂರಿಗೆ ಸಂಬಂಧಿಸಿದಂತೆ ಜಾಮೀನು ಪಡೆದ ದಿನವೇ ಸಿಧು ಅವರನ್ನು ಬಂಧಿಸಲಾಗಿತ್ತು. ಫೆಬ್ರವರಿ 9ರಂದು ಅವರು ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದರು. ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ ಸಿಧು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಸಿಧು ನೀಡಿದ ಸಂದರ್ಶನಗಳನ್ನು ಆಧರಿಸಿ ಪ್ರಾಸಿಕ್ಯೂಷನ್‌, ಹಿಂಸಾಚಾರಕ್ಕೆ ಎಡೆ ಮಾಡಿಕೊಡುವುದು ಮತ್ತು ರಾಷ್ಟ್ರಧ್ವಜವನ್ನು ಅವಮಾನಿಸುವುದು ಅವರ ಉದ್ದೇಶ ಎಂದು ಹೇಳಿತ್ತು.