Asaram bapu 
ಸುದ್ದಿಗಳು

ಅಸಾರಾಂ ಬಾಪು ಕುರಿತ ಹಾರ್ಪರ್‌ ಕಾಲಿನ್ಸ್ ಪ್ರಕಟಿತ ಪುಸ್ತಕಕ್ಕೆ ದೆಹಲಿ ಕೋರ್ಟ್ ತಡೆ

'ಗನ್ನಿಂಗ್ ಫಾರ್ ದಿ ಗಾಡ್‌ ಮ್ಯಾನ್: ದ ಟ್ರೂ ಸ್ಟೋರಿ ಬಿಹೈಂಡ್ ಅಸಾರಾಂ ಬಾಪೂಸ್ ಕನ್ವಿಕ್ಷನ್' ಹೊತ್ತಿಗೆಯನ್ನು ಇಂದು (ಸೆಪ್ಟೆಂಬರ್ 5ರಂದು) ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು.

Bar & Bench

ವಿವಾದಿತ ಧರ್ಮಗುರು ಅಸಾರಾಂ ಬಾಪು ಕುರಿತಾದ ‘ಗನ್ನಿಂಗ್ ಫಾರ್ ದಿ ಗಾಡ್ ಮ್ಯಾನ್ : ದಿ ಟ್ರೂ ಸ್ಟೋರಿ ಬಿಹೈಂಡ್ ಅಸಾರಾಂ ಬಾಪೂಸ್ ಕನ್ವಿಕ್ಷನ್’ ಪುಸ್ತಕ ಪ್ರಕಟಿಸದಂತೆ ದೆಹಲಿ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ (ಸಂಚಿತಾ vs ಸ್ಕ್ರಾಲ್ ಮತ್ತು ಇತರರು).

ಅಸಾರಾಂ ಬಾಪು ಅತ್ಯಾಚಾರ ಪ್ರಕರಣದಲ್ಲಿ ಸಹ ಆರೋಪಿಯಾದ ಸಂಚಿತಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆರ್ ಎಲ್ ಮೀನಾ ಅವರು ತಡೆಯಾಜ್ಞೆ ಆದೇಶ ನೀಡಿದರು. ಫಿರ್ಯಾದುದಾರೆ ಸಂಚಿತಾ ಪರ ವಕೀಲ ವಿಜಯ್ ಅಗರ್ವಾಲ್ ವಾದಿಸಿದರು.

ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಿರುವ ಈ ಪುಸ್ತಕವನ್ನು ಜೈಪುರದ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಲಾಂಬಾ ಮತ್ತು ಸಂಜೀವ್ ಮಾಥೂರ್ ಅವರು ರಚಿಸಿದ್ದು, ಸೆಪ್ಟೆಂಬರ್ 5ರಂದು ಪುಸ್ತಕವನ್ನು ಬಿಡುಗಡೆಗೊಳಿಸಲು ಉದ್ದೇಶಿಸಲಾಗಿತ್ತು.

ಡಿಜಿಟಲ್ ಮಾಧ್ಯಮ ‘ಸ್ಕ್ರಾಲ್’ ನಲ್ಲಿ ಪುಸ್ತಕದ ಆಯ್ದ ಭಾಗ ಪ್ರಕಟಿಸಿದ್ದನ್ನು ಗಮನಿಸಿದ ಸಂಚಿತಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿವಿಲ್ ಮೊಕದ್ದಮೆ ದಾಖಲಿಸಿರುವ ಸಂಚಿತಾ ಅವರು, ಈ ಕೃತಿಯನ್ನು ಸತ್ಯಾಧಾರಿತ ಪುಸ್ತಕ ಎಂದು ಹೇಳಲಾಗಿದೆ. ಆದರೆ, ಇಲ್ಲಿನ ಅಂಶಗಳು ವಿಚಾರಣಾ ದಾಖಲೆಗಳಿಗೆ ವಿರುದ್ಧವಾಗಿವೆ ಎಂದು ಆಕ್ಷೇಪಿಸಿದ್ದಾರೆ.

ಪುಸ್ತಕವು ಏಕಮುಖ ವಿಚಾರಗಳಿಂದ ತುಂಬಿದ್ದು, ಫಿರ್ಯಾದುದಾರರ ಮಾನಹಾನಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದ್ದು, ಪ್ರಕರಣ ರಾಜಸ್ಥಾನ ಹೈಕೋರ್ಟ್‌ ನಲ್ಲಿ ವಿಚಾರಣೆಗೆ ಒಳಪಟ್ಟಿದೆ. ಈಗಾಗಲೇ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದ್ದು, ಸದ್ಯದ ರೀತಿಯಲ್ಲಿ ಪುಸ್ತಕ ಪ್ರಕಟಿಸಿದರೆ ಫಿರ್ಯಾದುದಾರರ ಪ್ರಕರಣ ಪೂರ್ವಾಗ್ರಹಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಸಂವಿಧಾನದ ಪರಿಚ್ಛೇದ 21ರ ಅಡಿ ಅವರ ಹಕ್ಕಿಗೆ ವಿರುದ್ಧವಾಗಲಿದೆ ಎಂದು ವಾದಿಸಲಾಗಿದೆ.

“ಉಲ್ಲೇಖಿತ ಲೇಖನದ ಸ್ವಲ್ಪ ಭಾಗ… ಫಿರ್ಯಾದುರಾರರ ಬಗ್ಗೆ ಉಲ್ಲೇಖಿಸಿದ್ದು ಮತ್ತು ಆ ಪ್ಯಾರಾಗಳು ಫಿರ್ಯಾದುದಾರರ ಮಾನಹಾನಿಗೊಳಿಸುವಂತಿವೆ. ವಿಶೇಷವಾಗಿ, ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ.. ಫಿರ್ಯಾದುದಾರರ ಘನತೆಗೆ ಧಕ್ಕೆಯಾಗಿದ್ದು, ಉಲ್ಲೇಖಿಸಿದ ಪುಸ್ತಕ 05.09.2020ರಂದು ಬಿಡುಗಡೆಗೆ ಸಿದ್ಧವಾಗಿರುವಾಗ ಅವರಿಗೆ ಮಧ್ಯಂತರ ತಡೆಯಾಜ್ಞೆ ನೀಡದಿದ್ದರೆ ಅವರ ಘನತೆಗೆ ಸರಿಪಡಿಸಲಾಗದ ಹಾನಿಯಾಗಲಿದೆ ಎಂಬುದು ನನ್ನ ದೃಢ ನಂಬಿಕೆ. ಆದ್ದರಿಂದ, ಮುಂದಿನ ವಿಚಾರಣೆಯವರೆಗೆ ಪುಸ್ತಕ ಪ್ರಕಟಿಸಿದಂತೆ ಪ್ರತಿವಾದಿಗಳಿಗೆ ತಡೆ ನೀಡಲಾಗಿದೆ.”
ದೆಹಲಿ ನ್ಯಾಯಾಲಯ

ಪ್ರಕಾಶನ ಸಂಸ್ಥೆ, ಪುಸ್ತಕದ ಕರ್ತೃಗಳ ಜೊತೆಗೆ ಸ್ಕ್ರಾಲ್ ಮತ್ತು ಅದರ ಪ್ರಧಾನ ಸಂಪಾದಕರು ಹಾಗೂ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳನ್ನೂ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಸಮನ್ಸ್ ಜಾರಿಗೊಳಿಸಲಾಗಿದ್ದು, ಸೆಪ್ಟೆಂಬರ್ 30ಕ್ಕೆ ವಿಚಾರಣೆ ಮುಂದೂಡಲಾಗಿದೆ.