ಹಿರಿಯ ವಕೀಲ ಪ್ರದೀಪ್ ರೈ ಅವರು ಹೂಡಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಇಂಡಿಯಾ ಟುಡೆ ಸುದ್ದಿ ಸಂಸ್ಥೆ ಅಧ್ಯಕ್ಷ ಅರುಣ್ ಪುರಿ, ಉಪಾಧ್ಯಕ್ಷೆ ಕಾಲೀ ಪುರಿ ಹಾಗೂ ಸಂಸ್ಥೆಯ ಇನ್ನಿತರ ಪದಾಧಿಕಾರಿಗಳಿಗೆ ದೆಹಲಿ ನ್ಯಾಯಾಲಯ ಈಚೆಗೆ ಸಮನ್ಸ್ ನೀಡಿದೆ.
ರೈ ಅವರನ್ನು ವಂಚಕ ಸಂಜಯ್ ಶೆರ್ಪುರಿಯಾಗೆ ಹೋಲಿಸಿ ಇಂಡಿಯಾ ಟುಡೆ ಮಾನಹಾನಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಟಿಯಾಲ ಹೌಸ್ ನ್ಯಾಯಾಲಯದ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ತರುಣ್‌ಪ್ರೀತ್ ಕೌರ್ ಜುಲೈ 26 ರಂದು ಸಮನ್ಸ್ ಆದೇಶ ಹೊರಡಿಸಿದರು.
ಐಪಿಸಿ ಸೆಕ್ಷನ್ 500ರ ಅಡಿಯ ಅಪರಾಧಕ್ಕಾಗಿ ಆರೋಪಿಗಳಾದ ಅರುಣ್ ಪುರಿ, ಕಾಲೀ ಪುರಿ, ತಕ್ ವಾಹಿನಿಯ ವ್ಯವಸ್ಥಾಪಕ ಸಂಪಾದಕಿ ಸುಪ್ರಿಯಾ ಪ್ರಸಾದ್, ವ್ಯವಸ್ಥಾಪಕ ಸಂಪಾದಕ ಮಿಲಿಂದ್ ಖಾಂಡೇಕರ್ ಹಾಗೂ ಇಂಡಿಯಾ ಟುಡೆ ಸಂಸ್ಥೆಗೆ ಸಮನ್ಸ್ ನೀಡಲಾಗಿದೆ.
ಸಂಜಯ್ ಶೆರ್ಪುರಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್ಟಿಎಫ್) ರೈ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು ಎಂದು ಆಜ್ ತಕ್ ಹೊಸ ಸುದ್ದಿವಾಹಿನಿಯ ಜಾಲತಾಣದಲ್ಲಿ ಪ್ರಕಟವಾದ ಎರಡು ಸುದ್ದಿಗಳಿಗೆ ಸಂಬಂಧಿಸಿದಂತೆ ಇಂಡಿಯಾ ಟುಡೆ ಮತ್ತದರ ಪದಾಧಿಕಾರಿಗಳ ವಿರುದ್ಧ ರೈ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಲೇಖನಗಳು ಮಾನಹಾನಿಕರವಾಗಿದ್ದು, ತಮ್ಮನ್ನು ಶೆರ್ಪುರಿಯಾ ಅವರ ಸೋದರಳಿಯ ಎಂದು ತಪ್ಪಾಗಿ ಆರೋಪಿಸಿದ್ದಾರೆ ಎಂದು ರೈ ವಾದಿಸಿದ್ದರು.
ಮತ್ತೊಂದೆಡೆ, ರೈ ಅವರು ಎಬಿಪಿ ನ್ಯೂಸ್ ವಿರುದ್ಧವೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದು ನ್ಯಾಯಾಲಯ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿ ಮತ್ತದರ ಪದಾಧಿಕಾರಿಗಳಿಗೆ ಸಮನ್ಸ್ ನೀಡಿದೆ.
ಶೆರ್ಪುರಿಯಾ ಅವರು ಲಖನೌನ ಉದ್ಯಮಿಯಾಗಿದ್ದು, ಅವರು ಮತ್ತವರ ಸಹಾಯಕರು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಿಕಟ ಸಂಬಂಧ ಇದೆ ಎಂದು ಹೇಳಿಕೊಂಡು ಹಲವರಿಂದ ಹಣ ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.