Syed Shahnawaz Hussain  Facebook
ಸುದ್ದಿಗಳು

ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಶಹನವಾಜ್ ಹುಸೇನ್‌ಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ದೆಹಲಿ ಪೊಲೀಸರು ಉದ್ದೇಶಪೂರ್ವಕವಾಗಿ ಹುಸೇನ್ ವಿರುದ್ಧ ಸಾಕ್ಷ್ಯ ಸಂಗ್ರಹಿಸಿಲ್ಲ ಜೊತೆಗೆ ಎಫ್ಐಆರ್ ದಾಖಲಿಸಲು ಐದು ವರ್ಷ ತೆಗೆದುಕೊಂಡರು ಎಂದು ಸಂತ್ರಸ್ತೆ ದೂರಿದ್ದಾರೆ.

Bar & Bench

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿ ನಾಯಕ ಸೈಯದ್ ಶಹನವಾಜ್‌ ಹುಸೇನ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಸಮನ್ಸ್ ನೀಡಿದೆ.

ಹುಸೇನ್‌ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ತಿಳಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಪ್ರಕರಣ ರದ್ದತಿ ವರದಿಯನ್ನು  ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ವೈಭವ್ ಮೆಹ್ತಾ ನಿರಾಕರಿಸಿದರು.

ಸಂತ್ರಸ್ತೆ ಸಲ್ಲಿಸಿದ್ದ ಪ್ರತಿರೋಧ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲಿನಿಂದಲೂ ನಕರಾತ್ಮಕ ಧೋರಣೆ ಅನುಸರಿಸುತ್ತಿದ್ದು ಎಫ್‌ಐಆರ್‌ ದಾಖಲಿಸಲು ಐದು ವರ್ಷ ತೆಗೆದುಕೊಂಡಿದ್ದಾರೆ. ಹುಸೇನ್‌ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ಪೊಲೀಸರು ಉದ್ದೇಶಪೂರ್ವಕವಾಗಿ ಮುಂದಾಗಿಲ್ಲ ಎಂದು ಪೀಠ ತಿಳಿಸಿತು.

ಐಪಿಸಿ ಸೆಕ್ಷನ್‌ 376/328/506 ಅಡಿಯಲ್ಲಿಅಪರಾಧ ಪರಿಗಣಿಸಿದ ನ್ಯಾಯಾಲಯ ಹುಸೇನ್‌ ಅವರಿಗೆ ಸಮನ್ಸ್‌ ನೀಡಿತು. ಅಕ್ಟೋಬರ್‌ 20ರಂದು ನ್ಯಾಯಾಲಯದ ಎದುರು ಹಾಜರಾಗುವಂತೆ ಹುಸೇನ್‌ ಅವರಿಗೆ ಸೂಚಿಸಲಾಗಿದೆ.

ವಿಚಾರಣೆ ವೇಳೆ ನ್ಯಾಯಾಲಯ “ದೂರುದಾರೆ ಅತ್ಯಾಚಾರಕ್ಕೊಳಗಾಗಿಲ್ಲ ಎಂಬ ವಿಚಾರವನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳನ್ನು ತನಿಖಾಧಿಕಾರಿ ಸಲ್ಲಿಸದ ವಿನಾ ಆರಂಭದಲ್ಲೇ ಪ್ರಕರಣವನ್ನು ಕೈಬಿಡಲು ಕಾರಣವಿಲ್ಲ" ಎಂದು ನುಡಿದಿದೆ.

ತನ್ನನ್ನು 2018ರಏಪ್ರಿಲ್‌ನಲ್ಲಿ ತಮ್ಮ ತೋಟದ ಮನೆಗೆ ಕರೆದೊಯ್ದು ಅಮಲು ಬರಿಸುವ ಪದಾರ್ಥ ನೀಡಿ ಶಹನವಾಜ್‌ ಅತ್ಯಾಚಾರ ಎಸಗಿದ್ದರು. ಅಲ್ಲದೆ ಕೃತ್ಯದ ವೀಡಿಯೊ ಮಾಡಿ, ಘಟನೆ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರವಷ್ಟೇ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದಾಗಿ ದೂರುದಾರೆ ಆರೋಪಿಸಿದ್ದರು.