[ಅತ್ಯಾಚಾರ ಆರೋಪ] ಬಿಜೆಪಿ ನಾಯಕ ಶಾನವಾಜ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ; ಸುಪ್ರೀಂಗೆ ಹುಸೇನ್‌

"ಪ್ರಸ್ತುತ ಪ್ರಕರಣದಲ್ಲಿ, ಎಫ್ಐಆರ್ ದಾಖಲಿಸಲು ಪೊಲೀಸರು ಸಂಪೂರ್ಣ ಹಿಂಜರಿಕೆ ತೋರುತ್ತಿದ್ದಾರೆ" ಎಂದ ನ್ಯಾಯಮೂರ್ತಿ ಆಶಾ ಮೆನನ್.
Syed Shahnawaz Hussain
Syed Shahnawaz Hussain Facebook
Published on

ಬಿಜೆಪಿ ವಿಧಾನಪರಿಷತ್ ಸದಸ್ಯ ಸೈಯದ್ ಶಾನವಾಜ್ ಹುಸೇನ್ ವಿರುದ್ಧ ನೀಡಲಾದ ಅತ್ಯಾಚಾರ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಪೊಲೀಸರಿಗೆ ಆದೇಶಿಸಿದೆ.

ಅಮಲೇರಿಸುವ ವಸ್ತುವನ್ನು ನೀಡಿ ಅತ್ಯಾಚಾರ ನಡೆಸಿರುವ ಸಂಜ್ಞೇಯ ಅಪರಾಧ ನಡೆದಿದ್ದರೂ ಪೊಲೀಸ್ ಆಯುಕ್ತರಿಗೆ ನೀಡಿದ ದೂರು ಆಧರಿಸಿ ಎಫ್‌ಐಆರ್‌ ಏಕೆ ದಾಖಲಿಸಿಲ್ಲ ಎಂಬುದಕ್ಕೆ ಪೊಲೀಸರು ಬಹಳಷ್ಟು ವಿವರಣೆಗಳನ್ನು ನೀಡಬೇಕಿದೆ ಎಂದು ನ್ಯಾ. ಆಶಾ ಮೆನನ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಘಟನೆಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನಿರ್ದೇಶನಗಳನ್ನು ನೀಡುವವರೆಗೂ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ಅಲ್ಲದೆ ಹೈಕೋರ್ಟ್‌ಗೆ ಸಲ್ಲಿಸಲಾದ ಸ್ಥಿತಿಗತಿ ವರದಿಯಲ್ಲಿ ಎಫ್‌ಐಆರ್‌ ಏಕೆ ದಾಖಲಿಸಿಲ್ಲ ಎಂಬ ಬಗ್ಗೆ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಹೇಳಿತು.

“ಎಫ್‌ಐಆರ್‌ ಮಾತ್ರವೇ ತನಿಖಾ ವ್ಯವಸ್ಥೆಯು ಕಾರ್ಯಾಚರಣೆಗೆ ಇಳಿಯುವಂತೆ ಮಾಡುತ್ತದೆ. ದೂರು ನೀಡಿದ ಅಪರಾಧದ ತನಿಖೆಗೆ ಎಫ್‌ಐಆರ್‌ ಬುನಾದಿಯಾಗಿದೆ. ತನಿಖೆಯ ನಂತರವಷ್ಟೇ ಅಪರಾಧ ನಡೆದಿದೆಯೇ, ಯಾರು ಕೃತ್ಯ ಎಸಗಿದ್ದಾರೆ ಎಂಬ ಕುರಿತು ಪೊಲೀಸರು ನಿರ್ಧರಿಸಬಹುದು. ಹೀಗಾಗಿ ಎಫ್‌ಐಆರ್‌ ದಾಖಲಿಸಲು ಪೊಲೀಸರು ಸಂಪೂರ್ಣ ಹಿಂಜರಿದಿರುವಂತೆ ತೋರುತ್ತಿದೆ” ಎಂದು ನ್ಯಾಯಾಲಯ ಹೇಳಿತು.

Also Read
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಕ್ಷಮಾಪಣೆ ನೀತಿಯಡಿ 11 ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್ ಸರ್ಕಾರ

ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡಿದ್ದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ (ಎಂಎಂ) ಆದೇಶವನ್ನು ವಿಶೇಷ ನ್ಯಾಯಾಧೀಶರು ಎತ್ತಿ ಹಿಡಿದಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ದೂರುದಾರರು ಎತ್ತಿರುವ ಆರೋಪಗಳು ರುಜುವಾತಾಗಿಲ್ಲ ಎಂದು ಪೊಲೀಸರು ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ತಿಳಿಸಿದ್ದರು. ಆದರೂ ಲಲಿತಾ ಕುಮಾರಿ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಣ ಪ್ರಕರಣದ ತೀರ್ಪನ್ನು ಆಧರಿಸಿ ಎಫ್‌ಐಆರ್‌ ದಾಲಿಸುವಂತೆ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸೂಚಿದ್ದರು. ಬಳಿಕ ವಿಶೇಷ ನ್ಯಾಯಾಧೀಶರು ಕೂಡ ಈ ತೀರ್ಪನ್ನು ಎತ್ತಿಹಿಡಿದಿದ್ದರು.

ಪೊಲೀಸ್ ಕಮಿಷನರ್‌ಗೆ ದಿನಾಂಕವಿಲ್ಲದ ದೂರು ನೀಡಲಾಗಿದ್ದು ಇದು ಸಿಆರ್‌ಪಿಸಿ ಸೆಕ್ಷನ್ 154 (1) ಅಡಿಯಲ್ಲಿ ನಿಲ್ಲುವುದಿಲ್ಲ.‌ ಅಲ್ಲದೆ ಪೊಲೀಸರನ್ನು ಸಂಪರ್ಕಿಸದೆ ನ್ಯಾಯಾಲಯಕ್ಕೆ ಬಂದಿರುವುದು ಸಂಪೂರ್ಣ ಕಾನೂನು ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ವಾದಿಸಿದರು.

ಈ ವಾದವನ್ನು ಒಪ್ಪದ ಪೀಠ ಪೊಲೀಸ್ ಅಧಿಕಾರಿಯೊಬ್ಬರು ದೂರು ದಾಖಲಿಸಲು ನಿರಾಕರಿಸಿದರೆ, ದೂರುದಾರರು ಉನ್ನತ ಪೊಲೀಸ್ ಅಧಿಕಾರಿಗೆ ಮಾಹಿತಿಯ ಸಾರವನ್ನು ಕಳುಹಿಸಬಹುದು. ಸಂಜ್ಞೇಯ ಅಪರಾಧ ನಡೆದಿದ್ದ ಸಂದರ್ಭದಲ್ಲಿ ದೂರುದಾರರು ಉನ್ನತ ಅಧಿಕಾರಿಯನ್ನು ಸಂಪರ್ಕಿಸುವ ಹಕ್ಕನ್ನು ಕಾನೂನು ನೀಡುತ್ತದೆ. ಅಪರಾಧದ ಮಾಹಿತಿ ಪಡೆದ ಠಾಣಾಧಿಕಾರಿ ಎಫ್‌ಐಆರ್‌ ದಾಖಲಿಸಬೇಕಿತ್ತು ಎಂದಿತು.

“ವಿಚಾರಣಾ ನ್ಯಾಯಾಲಯ ನೀಡಿದ ನಿರ್ದೇಶನಗಳನ್ನು ಅಕ್ರಮ ಎನ್ನಲಾಗದು. ಈ ಆದೇಶ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ” ಎಂದ ಪೀಠ ಅರ್ಜಿಯನ್ನು ವಜಾಗೊಳಿಸಿ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿತು. ಅಲ್ಲದೆ ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿತು.

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಶಾನವಾಜ್‌ 

ಇತ್ತ ದೆಹಲಿ ಹೈಕೋರ್ಟ್‌ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ಸೂಚಿಸಿರುವ ಬೆನ್ನಿಗೇ ಈ ಆದೇಶದ ವಿರುದ್ಧ ಶಾನವಾಜ್‌ ಹುಸೇನ್‌ ಸುಪ್ರೀಂ ಕೋರ್ಟ್‌ ಮೊರೆ ಹೋದರು.

ಶಾನಜಾಜ್‌ ಹುಸೇನ್‌ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆದಿದ್ದು ಪ್ರಕರಣವನ್ನು ತುರ್ತಾಗಿ ಪರಿಗಣಿಸುವಂತೆ ಕೋರಿ ಸಿಜೆಐ ಎನ್‌ ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಶಾನವಾಜ್‌ ಪರ ವಕೀಲರು ಗುರುವಾರ ಬೆಳಗ್ಗೆ ಉಲ್ಲೇಖಿಸಿದರು. ಮುಂದಿನ ವಾರ ಪ್ರಕರಣವನ್ನು ಆಲಿಸುವುದಾಗಿ ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com