Dhruv Rathee 
ಸುದ್ದಿಗಳು

ಮುಂಬೈ ಬಿಜೆಪಿ ವಕ್ತಾರ ಹೂಡಿರುವ ಮಾನನಷ್ಟ ಮೊಕದ್ದಮೆ: ಖ್ಯಾತ ಯೂಟ್ಯೂಬರ್ ಧ್ರುವ ರಾಠಿಗೆ ದೆಹಲಿ ನ್ಯಾಯಾಲಯ ಸಮನ್ಸ್

ಧ್ರುವ ರಾಠಿ ಅವರು ಯೂಟ್ಯೂಬ್ ವಾಹಿನಿಯಲ್ಲಿ ತಮ್ಮನ್ನುಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ದೂರಿದ್ದಾರೆ.

Bar & Bench

ತಮ್ಮನ್ನು ನಿಂದನಾತ್ಮಕವಾಗಿ ಟ್ರೋಲ್‌ ಮಾಡಲಾಗಿದೆ ಎಂದು ದೂರಿ ಮುಂಬೈ ಬಿಜೆಪಿ ಘಟಕದ ವಕ್ತಾರ ಸುರೇಶ್‌ ಕರಮ್ಶಿ ನಖುವಾ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಂತೆ ದೆಹಲಿ ನ್ಯಾಯಾಲಯ ಖ್ಯಾತ ಯೂಟ್ಯೂಬರ್‌ ಧ್ರುವ್‌ ರಾಠಿ ಅವರಿಗೆ ಸಮನ್ಸ್‌ ನೀಡಿದೆ.

ಸಾಕೇತ್ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಗುಂಜನ್ ಗುಪ್ತಾ ಅವರು ಜುಲೈ 19ರಂದು ಆದೇಶ ಹೊರಡಿಸಿದ್ದಾರೆ.

ತಮಗೆ ಮಧ್ಯಂತರ ಪರಿಹಾರ ದೊರಕಿಸಿಕೊಡುವಂತೆ ನಖುವಾ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ರಾಠಿ ಅವರಿಗೆ ನೋಟಿಸ್‌ ನೀಡಿದೆ. ಆಗಸ್ಟ್ 6 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನಖುವಾ ಪರವಾಗಿ ವಕೀಲರಾದ ರಾಘವ್ ಅವಸ್ಥಿ ಮತ್ತು ಮುಖೇಶ್ ಶರ್ಮಾ ವಾದ ಮಂಡಿಸಿದರು.

ತಮ್ಮನ್ನು 'ಹಿಂಸಾತ್ಮಕ ಮತ್ತು ನಿಂದನಾತ್ಮಕ ಟ್ರೋಲ್‌ಗಳ' ಗುಂಪಿನ ಭಾಗ ಎಂದು ರಾಠಿ ಕರೆದಿದ್ದಾರೆ ಡಿಜಿಟಲ್‌ ವೇದಿಕೆಗಳಲ್ಲಿ ಅವರ ಹೇಳಿಕೆ ವ್ಯಾಪಕವಾಗಿ ಹಬ್ಬಿದ್ದು ಅವರ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಈ ಆರೋಪಗಳಿಂದಾಗಿ ತಾನು ವ್ಯಾಪಕ ಖಂಡನೆ ಮತ್ತು ಅಪಹಾಸ್ಯಕ್ಕೆ ತುತ್ತಾಗಿದ್ದೇನೆ ಎಂದು ಸುರೇಶ್‌ ವಿವರಿಸಿದ್ದಾರೆ.

ಇದು ತನ್ನ ವ್ಯಕ್ತಿತ್ವ ಹರಣಕ್ಕಾಗಿ ಮಾಡಿದ ಉದ್ದೇಶಪೂರ್ವಕ ಪ್ರಚಾರ. ಅವರ ಆರೋಪ ದೂರಗಾಮಿ ಪರಿಣಾಮ ಉಂಟು ಮಾಡುವ ಅಪನಂಬಿಕೆಯ ಬೀಜಗಳನ್ನು ಬಿತ್ತಿದೆ. ಇಂತಹ ಸುಳ್ಳು ಆಪಾದನೆಗಳ ಪರಿಣಾಮ ಬಹುವಿಧವಾಗಿದ್ದು ಇದು ತನಗೆ ಸರಿಪಡಿಸಲಾಗದಂತಹ ಧಕ್ಕೆ ಉಂಟು ಮಾಡಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.