Umar Khalid
Umar Khalid 
ಸುದ್ದಿಗಳು

ದೆಹಲಿ ಹಿಂಸಾಚಾರ ಪ್ರಕರಣ: ಅ.22ರವರೆಗೆ ಉಮರ್ ಖಾಲಿದ್ ರನ್ನು‌ ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ಅಕ್ಟೋಬರ್ 22ರ ವರೆಗೆ ದೆಹಲಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿ ಖಾಲಿದ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದ ಪೊಲೀಸರು ಅವರನ್ನು ಬಂಧಿಸಿದ್ದರು. 10 ದಿನ ಪೊಲೀಸರ ಬಂಧನದಲ್ಲಿದ್ದ ಖಾಲಿದ್ ಅವರ ಬಂಧನ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಕಡಕಡಡೂಮದಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಮುಂದೆ ವರ್ಚುವಲ್ ವಿಚಾರಣೆಗೆ ಹಾಜರುಪಡಿಸಲಾಗಿತ್ತು.

ಖಾಲಿದ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಿದ್ದ ಪೊಲೀಸರ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿತು. ನ್ಯಾಯಾಲಯದ ಆದೇಶದ ಬಳಿಕ ಖಾಲಿದ್ ಅವರು ತಮ್ಮ ಪೋಷಕರನ್ನು ಭೇಟಿ ಮಾಡಲು, ಕನ್ನಡಕ ಹಾಗೂ ಪುಸಕ್ತವನ್ನು ಜೈಲಿಗೆ ಒಯ್ಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸೂಕ್ತವಾದ ಅರ್ಜಿ ಸಲ್ಲಿಸುವಂತೆ ಖಾಲಿದ್‌ಗೆ ನ್ಯಾಯಾಲಯ ಸೂಚಿಸಿತು.

ವಿವಿಧ ಸಂಘಟನೆಗಳ ಮೂಲಕ ಖಾಲಿದ್ ಮತ್ತು ಅವರ ಸಹಚರರ ಆಳವಾದ ಪಿತೂರಿಯ ಭಾಗವಾಗಿ ದೆಹಲಿ ಗಲಭೆ ನಡೆದಿದೆ. ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ. ಇದನ್ನು ವಿರೋಧಿಸಲು ಜನರು ರಸ್ತೆಗೆ ಇಳಿಯಬೇಕು ಎಂದು ಪ್ರಚೋದನಾಕಾರಿ ಭಾಷಣವನ್ನೂ ಖಾಲಿದ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.