Delhi Police
Delhi Police 
ಸುದ್ದಿಗಳು

[ದೆಹಲಿ ಧರ್ಮ ಸಂಸದ್] ನಿಲುವು ಬದಲಿಸಿದ ಪೊಲೀಸರು: ದ್ವೇಷ ಪ್ರಚೋದನೆ ವಿರುದ್ಧ ಎಫ್ಐಆರ್ ಎಂದು ಸುಪ್ರೀಂಗೆ ಹೇಳಿಕೆ

Bar & Bench

ತಮ್ಮ ಹಿಂದಿನ ನಿಲುವು ಬದಲಿಸಿರುವ ದೆಹಲಿ ಪೊಲೀಸರು ನಗರದಲ್ಲಿ ನಡೆದಿದ್ದ ಧರ್ಮಸಂಸದ್‌ನಲ್ಲಿ ದ್ವೇಷಕ್ಕೆ ಕುಮ್ಮಕ್ಕು ನೀಡಿದ್ದಕ್ಕಾಗಿ ಹಾಗೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಎಫ್‌ಐಆರ್‌ ದಾಖಲಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ನೂತನ ಅಫಿಡವಿಟ್‌ನಲ್ಲಿ ಐಪಿಸಿ ಸೆಕ್ಷನ್‌ 153 ಎ (ಧಾರ್ಮಿಕ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು), 295 ಎ (ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶದಿಂದ ಮಾಡಿದ ದುರುದ್ದೇಶಪೂರ್ವಕ ಕೃತ್ಯ) ಹಾಗೂ 298ರ (ಉಚ್ಚರಣೆ, ಪದಪ್ರಯೋಗ ಇತ್ಯಾದಿ ಕ್ರಿಯೆಗಳ ಮೂಲಕ ಧಾರ್ಮಿಕ ಭಾವನೆ ಘಾಸಿಗೊಳಿಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ. ಅಲ್ಲದೆ "ಕಾನೂನು ಪ್ರಕಾರ ತನಿಖೆ ನಡೆಸಲಾಗುವುದು" ಎಂದು ಕೂಡ ಮಾಹಿತಿ ನೀಡಲಾಗಿದೆ.

“ದೆಹಲಿ ಧರ್ಮಸಂಸದ್‌ನಲ್ಲಿ ಯಾವುದೇ ದ್ವೇಷ ಭಾಷಣ ಮಾಡಿರಲಿಲ್ಲ” ಎಂದು ಏಪ್ರಿಲ್‌ನಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಪೊಲೀಸರು ತಿಳಿಸಿದ್ದರು. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಪೊಲೀಸ್‌ ಅಧಿಕಾರಿಗಳು ಗಮನವಿಟ್ಟು ಅಫಿಡವಿಟ್‌ ಸಲ್ಲಿಸಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿತ್ತು. ಬಳಿಕ ಹೊಸದಾಗಿ ಅಫಿಡವಿಟ್‌ ಸಲ್ಲಿಸಲು ಪೊಲೀಸರು ಒಪ್ಪಿದ್ದರು.