Firecrackers
Firecrackers 
ಸುದ್ದಿಗಳು

ದೆಹಲಿಯಲ್ಲಿ ದೀಪಾವಳಿಗಿಲ್ಲ ಪಟಾಕಿ, 2023ರ ಜನವರಿವರೆಗೆ ನಿಷೇಧ

Bar & Bench

ರಾಷ್ಟ್ರ ರಾಜಧಾನಿಯಲ್ಲಿ ಜನವರಿ 2023ರವರೆಗೆ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಿರುವುದಾಗಿ ದೆಹಲಿಯ ಪರಿಸರ, ಅಭಿವೃದ್ಧಿ, ಸಾಮಾನ್ಯ ಆಡಳಿತ ಸಚಿವ ಗೋಪಾಲ್ ರೈ ಅವರು ಬುಧವಾರ ಘೋಷಿಸಿದ್ದಾರೆ.

ದೆಹಲಿ ನಾಗರಿಕರಿಗೆ ಮಾಲಿನ್ಯದಿಂದ ಉಂಟಾಗುವ ಆರೋಗ್ಯದ ಅಪಾಯಗಳು ಈ ನಿರ್ಧಾರಕ್ಕೆ ಕಾರಣವೆಂದು ಸಚಿವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ದೆಹಲಿ ಪೊಲೀಸರು, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಮತ್ತು ಕಂದಾಯ ಇಲಾಖೆಯೊಂದಿಗೆ ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲು ಸಚಿವರು ಮುಂದಾಗಿದ್ದಾರೆ

ಕಳೆದ ವರ್ಷದಂತೆ ದೆಹಲಿಯಲ್ಲಿ ಮಾಲಿನ್ಯದ ಭೀತಿಯಿಂದ ಜನರನ್ನು ರಕ್ಷಿಸುವ ಸಲುವಾಗಿ ಈ ಬಾರಿಯೂ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಗರದಲ್ಲಿ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಮತ್ತು ವಿತರಣೆಯನ್ನೂ ನಿಷೇಧಿಸಲಾಗುವುದು ಎಂದು ಪರಿಸರ ಸಚಿವ ರೈ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪಟಾಕಿ ಮೇಲೆ ಸಂಪೂರ್ಣ ನಿಷೇಧ ಹೇರುತ್ತಿರುವುದು ವಿವಾದದ ವಿಚಾರವಾಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ಜನದಟ್ಟಣೆಯ ಪ್ರದೇಶಗಳಲ್ಲಿ ಪಟಾಕಿ ಮಾರಾಟದ ನಿಷೇಧವನ್ನು ಎತ್ತಿಹಿಡಿದಿತ್ತು. ಪಟಾಕಿಗಳು ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲದೆ ಅಗಾಧವಾದ ಪರಿಸರ ಮಾಲಿನ್ಯ ಉಂಟುಮಾಡುತ್ತವೆ ಎಂದು ಅದು ತರ್ಕಿಸಿತ್ತು.

ಕಳೆದ ವರ್ಷ, ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬಳಕೆಗೆ ಸಂಪೂರ್ಣ ನಿಷೇಧ ಹೇರುವ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು, ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಅದು ಹೇಳಿತ್ತು.