ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿನ ಪಟಾಕಿ ಮಾರಾಟ ನಿಷೇಧ ಎತ್ತಿ ಹಿಡಿದ ಹೈಕೋರ್ಟ್‌

ಪಟಾಕಿ ದುರಂತದಿಂದ ಅವಘಡ ಸಂಭವಿಸಿದರೆ ಅದರ ನಿರ್ವಹಣೆ, ನಿಯಂತ್ರಣ ಕಷ್ಟ. ಜನನಿಬಿಡ ಪ್ರದೇಶಗಳಲ್ಲಿ ದಾರಿ ಕಿರಿದಾಗಿರುತ್ತವೆ. ಆ್ಯಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ ತುರ್ತಾಗಿ ಅವಘಡ ಸಂಭವಿಸಿದ ಪ್ರದೇಶಕ್ಕೆ ತೆರಳಲು ಕಷ್ಟ ಎಂದಿದ್ದ ಪೊಲೀಸರು.
Firecrackers
Firecrackers
Published on

ಪಟಾಕಿ ಕೇವಲ ಮನುಷ್ಯರ ಆರೋಗ್ಯಕ್ಕೆ ಮಾತ್ರವಲ್ಲ ಪರಿಸರದ ಮೇಲೂ ದುಷ್ಪರಿಣಾಮ ಬೀರುವುದರಿಂದ ಅಪಾಯಕಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕ್ರಮವನ್ನು ಎತ್ತಿಡಿದಿದೆ.

ಬೆಂಗಳೂರಿನ ಮಾರುಕಟ್ಟೆ ಮತ್ತು ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದು ನಗರ ಪೊಲೀಸ್ ಆಯುಕ್ತರು 2012ರ ಏಪ್ರಿಲ್‌ 12ಕ್ಕೆ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ರಾಯಲ್ ಫೈಯರ್ ವರ್ಕ್ ಇಂಡಸ್ಟ್ರೀಸ್ ಮತ್ತು ನಟರಾಜ್ ಟ್ರೇಡಿಂಗ್ ಕಂಪೆನಿ ಸೇರಿದಂತೆ ಪಟಾಕಿ ಮಾರಾಟಗಾರ ಕಂಪೆನಿಗಳು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ (ಡಿಜಿಪಿ) ಮೇಲ್ಮನವಿ ಸಲ್ಲಿಸಿದ್ದರು. ಡಿಜಿಪಿ ಅವರು ಸಹ ನಗರ ಪೊಲೀಸ್ ಆಯುಕ್ತರ ಕ್ರಮವನ್ನು ಎತ್ತಿಡಿದಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕ ಸದಸ್ಯ ಪೀಠವು ವಜಾ ಮಾಡಿದೆ.

ಪಟಾಕಿ ಬಳಕೆಯಿಂದ ಪ್ರಕೃತಿಯ ಮೇಲೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಉಂಟಾಗುತ್ತದೆ. ಈಗಾಗಲೇ ಮಾಲಿನ್ಯದಿಂದ ನಲುಗುತ್ತಿರುವ ಜನನಿಬಿಡ ಪ್ರದೇಶಗಳಲ್ಲಿ ಪಟಾಕಿಗಳ ಪರಿಣಾಮ ಹೆಚ್ಚಿರುತ್ತದೆ. ಪಟಾಕಿಗಳ ಉತ್ಪಾದನೆ, ಸಾಗಾಟ ಮತ್ತು ಅವುಗಳನ್ನು ಸುಡುವುದರಿಂದ ಪ್ರಕೃತಿ ಮಾತೆಗೆ ಹಾನಿಯಾಗುತ್ತದೆ ಎಂದು ಹೇಳಲು ಯಾವುದೇ ಸಂಶೋಧನೆ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.

ಪಟಾಕಿಗಳು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ. ಬೆಂಗಳೂರಿನಂತಹ ಜನನಿಬಿಡ ಪ್ರದೇಶಗಳು ಶಬ್ದ ಹಾಗೂ ವಾಯು ಮಾಲಿನ್ಯದಿಂದ ನರಳುತ್ತಿವೆ. ಹೀಗಿರುವಾಗಿ ಪಟಾಕಿಗಳನ್ನು ಸುಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಈಗಿರುವ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಪಟಾಕಿಗಳಿಂದ ಎಷ್ಟೋ ಮಕ್ಕಳು ಹಾಗೂ ಯುವಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದ ಅವರು ಜೀವಿಸುವ ಹಕ್ಕು ಉಲ್ಲಂಘನೆಯಾಗುತ್ತಿದೆ. ಪ್ರತಿ ಬಾರಿಯೂ ಪಟಾಕಿಯಿಂದ ಹೆಚ್ಚಾಗಿ ಗಾಯಗೊಂಡಿರುವುದು ಮಕ್ಕಳೇ ಆಗಿದ್ದಾರೆ. ಪಟಾಕಿಯಿಂದ ಕಣ್ಣು ಕಳೆದುಕೊಳ್ಳುವವರು ತಮ್ಮ ಉಳಿದ ಜೀವನನ್ನು ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ, ಸಾಗಾಟ ಮತ್ತು ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆದಿದ್ದ ಆಯುಕ್ತರು ಹಾಗೂ ಡಿಜಿಪಿ, ಪಟಾಕಿ ದುರಂತದಿಂದ ಅವಘಡ ಸಂಭವಿಸಿದರೆ ಅವುಗಳನ್ನು ನಿರ್ವಹಣೆ, ನಿಯಂತ್ರಣ ಮಾಡಲು ಕಷ್ಟವಾಗುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಕಿರಿದಾದ ದಾರಿ ಇರುತ್ತವೆ. ಆ್ಯಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು ತುರ್ತಾಗಿ ಅವಘಡ ಸಂಭವಿಸಿದ ಪ್ರದೇಶಕ್ಕೆ ತೆರಳಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದರು.

ಈ ಕ್ರವನ್ನು ಆಕ್ಷೇಪಿಸಿದ್ದ ಪಟಾಕಿ ಮಾರಾಟ ಕಂಪನಿಗಳು, ಆಯುಕ್ತರು ಹಾಗೂ ಡಿಜಿಪಿಯ ಆದೇಶದಿಂದ ತಾವು ವ್ಯಾಪಾರ ವಹಿವಾಟು ನಡೆಸಲು ಆಗುತ್ತಿಲ್ಲ. ಇದರಿಂದ ತಮ್ಮ ಮೂಲಭೂತ ಹಕ್ಕು ಉಲ್ಲಂಘನೆಯಾಗಿದ್ದು, ನಗರ ಆಯುಕ್ತರ ಹಾಗೂ ಡಿಜಿಪಿ ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಬೇಕು ಎಂದು ಕೋರಿದರು. ಈ ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.

Kannada Bar & Bench
kannada.barandbench.com