Supreme Court Constitution Bench 
ಸುದ್ದಿಗಳು

ದೆಹಲಿ ಸರ್ಕಾರ ವರ್ಸಸ್‌ ಎಲ್‌ಜಿ: ಅಧಿಕಾರಿಗಳ ಮೇಲಿನ ನಿಯಂತ್ರಣ ಪ್ರಕರಣ ಆಲಿಸಲಿರುವ ಸುಪ್ರೀಂ ಸಾಂವಿಧಾನಿಕ ಪೀಠ

ಹಿಂದಿನ ಸಾಂವಿಧಾನಿಕ ಪೀಠವು ಇತ್ಯರ್ಥಪಡಿಸಿರುವ ವಿಚಾರಗಳನ್ನು ಮರುಪರಿಶೀಲಿಸುವುದಿಲ್ಲ. ಆಡಳಿತ ಸೇವೆಗಳಿಗೆ ಸಂಬಂಧಿಸಿದ ವಿಚಾರವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ನಾವು ಭಾವಿಸಿದ್ದೇವೆ ಎಂದು ತ್ರಿಸದಸ್ಯ ಪೀಠ ಹೇಳಿದೆ.

Bar & Bench

ದೆಹಲಿಯಲ್ಲಿ ನಿಯೋಜಿಸುವ ಭಾರತೀಯ ಆಡಳಿತ ಸೇವೆ (ಐಎಎಸ್‌) ಮತ್ತು ಇತರೆ ಅಧಿಕಾರಿಗಳ ಆಡಳಿತಾತ್ಮಕ ನಿಯಂತ್ರಣ ವಿಚಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದೆ.

ಪಕ್ಷಕಾರರ ವಾದಗಳನ್ನು ನಾವು ಆಲಿಸಿದ್ದೇವೆ. 239ಎಎ ವಿಧಿಯ ವ್ಯಾಖ್ಯಾನ ಪ್ರಮುಖ ವಿಚಾರವಾಗಿದೆ. ಎಲ್ಲಾ ವಿಚಾರಗಳನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ. ಹಿಂದಿನ ಸಾಂವಿಧಾನಿಕ ಪೀಠವು ಇತ್ಯರ್ಥಪಡಿಸಿರುವ ವಿಚಾರಗಳನ್ನು ಮರುಪರಿಶೀಲಿಸಲು ಹೋಗುವುದಿಲ್ಲ. ಇನ್ನು ಆಡಳಿತ ಸೇವೆಗಳಿಗೆ ಸಂಬಂಧಿಸಿದ ವಿಚಾರವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದು ಸೂಕ್ತ ಎಂದು ನಾವು ಭಾವಿಸಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಕಳೆದ ವಾರ ಪ್ರಕರಣದ ತೀರ್ಪು ಕಾಯ್ದಿರಿಸುವಾಗ ನ್ಯಾಯಾಲಯವು ವಿಚಾರವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಸುಳಿವು ನೀಡಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಸೇವೆಗಳ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರವು 239ಎಎ ವಿಧಿಯ ಅಡಿ ಮಹತ್ವದ ಕಾನೂನಿನ ಪ್ರಶ್ನೆಯಾಗಿದ್ದು, ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಒಳಿತು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸಲಹೆ ಮಾಡಿದ್ದರು.

ಪ್ರಮುಖ ಅಧಿಕಾರಿಗಳ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಆಡಳಿತಾತ್ಮಕ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರವು ದೆಹಲಿ ಸರ್ಕಾರವನ್ನು ಹೊರಗಿಟ್ಟಿದೆ. ಹೀಗಾಗಿ, ಅಧಿಕಾರಿಗಳು ಲೆಫ್ಟಿನೆಂಟ್‌ ಗವರ್ನರ್‌ ಆದೇಶದ ಅನ್ವಯ ಕೇಂದ್ರ ಸರ್ಕಾರದ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೆಹಲಿ ಸರ್ಕಾರ ವಾದಿಸಿದೆ. 2019ರ ಏಪ್ರಿಲ್‌ 14ರಂದು ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಸಂಘರ್ಷಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.