Mahua Moitra , Delhi High Court Facebook
ಸುದ್ದಿಗಳು

ಮಹುವಾ ವಿರುದ್ಧ ಆರೋಪಪಟ್ಟಿ ಸಲ್ಲಿಕೆಗೆ ಅನುಮತಿ ಕೋರಿಕೆ: ಲೋಕಪಾಲ್‌ಗೆ ಎರಡು ತಿಂಗಳ ಕಾಲಾವಕಾಶ ನೀಡಿದ ದೆಹಲಿ ಹೈಕೋರ್ಟ್

ಲೋಕಪಾಲ್‌ ಈ ಹಿಂದೆ ನೀಡಿದ್ದ ಆದೇಶವನ್ನು ಡಿಸೆಂಬರ್‌ನಲ್ಲಿ ರದ್ದುಗೊಳಿಸಿದ ನ್ಯಾಯಾಲಯ, ಒಂದು ತಿಂಗಳೊಳಗೆ ಹೊಸ ತೀರ್ಪು ನೀಡುವಂತೆ ಆದೇಶಿಸಿತ್ತು. ಕಾಲಮಿತಿಯನ್ನು ಈಗ ಇನ್ನೂ ಎರಡು ತಿಂಗಳು ವಿಸ್ತರಿಸಲಾಗಿದೆ.

Bar & Bench

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅನುಮತಿ ನೀಡುವ ಬಗ್ಗೆ ನಿರ್ಧರಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ಭಾರತೀಯ ಲೋಕಪಾಲ್‌ಗೆ ಇನ್ನೂ ಎರಡು ತಿಂಗಳು ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ ಪ್ರಕರಣ ಕುರಿತು ಹೆಚ್ಚಿನ ಸಮಯಾವಕಾಶ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.

ಡಿಸೆಂಬರ್ 19, 2025ರಂದು ಮಹುವಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಲೋಕಪಾಲ್ ಆದೇಶ ನೀಡುವಾಗ ಎಡವಿದೆ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣವನ್ನು ಮರುಪರಿಶೀಲಿಸಿ ಒಂದು ತಿಂಗಳೊಳಗೆ ಹೊಸ ಆದೇಶ ಹೊರಡಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಆದರೆ, ಲೋಕಪಾಲ್ ನಂತರ ಪ್ರಕರಣವನ್ನು ನಿರ್ಧರಿಸಲು ಹೆಚ್ಚಿನ ಸಮಯಾವಕಾಶ ಕೋರಿ ಅರ್ಜಿ ಸಲ್ಲಿಸಿತ್ತು.

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ನಗದು ಮತ್ತು ಐಷಾರಾಮಿ ಉಡುಗೊರೆ ಸ್ವೀಕರಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು.

ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ 2013ರ ಸೆಕ್ಷನ್ 20(7)(ಎ) ಸಹವಾಚನ ಸೆಕ್ಷನ್ 23(1) ರ ಅಡಿಯಲ್ಲಿ ಲೋಕಪಾಲ್ ಪೂರ್ಣ ಪೀಠ ತನ್ನ ಅಧಿಕಾರ ಚಲಾಯಿಸಿ, ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಅದರ ಪ್ರತಿಯನ್ನು ಲೋಕಪಾಲಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು.

ಆದರೆ ತಮ್ಮ ವಿವರವಾದ ಲಿಖಿತ ಮತ್ತು ಮೌಖಿಕ ವಾದಗಳನದನು ಪರಿಗಣಿಸದೆಯೇ ಆದೇಶ ನೀಡಲಾಗಿರುವುದರಿಂದ ಲೋಕಪಾಲ್ ಆದೇಶವು ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013ಕ್ಕೆ ವಿರುದ್ಧವಾಗಿದ್ದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ ಎಂದು ಮಹುವಾ ಹೈಕೋರ್ಟಿನಲ್ಲಿ ಆಕ್ಷೇಪಿಸಿದ್ದರು.

ಅರ್ಜಿಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೈಕೋರ್ಟ್ ಪುರಸ್ಕರಿಸಿತ್ತು. ನಂತರ ನ್ಯಾಯಾಲಯ ಲೋಕಪಾಲ್‌ಗೆ ಪ್ರಕರಣವನ್ನು ಹೊಸದಾಗಿ ನಿರ್ಧರಿಸಲು ಸೂಚಿಸಿತ್ತು.