

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಶಾಸಕರಾದ ಕುಲದೀಪ್ ಸಿಂಗ್ ಸೆಂಗರ್‌ಗೆ ಜಾಮೀನು ನೀಡಿದ ಹಾಗೂ ಆತನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಜಾರಿಯಾಗದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ರಜಾಕಾಲೀನ ಪೀಠ ಸೆಂಗರ್‌ಗೆ ನೋಟಿಸ್ ಜಾರಿ ಮಾಡಿತು. ಹೈಕೋರ್ಟ್ ಆದೇಶದ ಆಧಾರದಲ್ಲಿ ಸೆಂಗರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂತಲೂ ಅದು ಆದೇಶಿಸಿತು.
“ನೋಟಿಸ್ ಜಾರಿಗೊಳಿಸಲಾಗಿದೆ. ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಆರೋಪಿ ಪರವಾಗಿ ಹಾಜರಿದ್ದ ಹಿರಿಯ ವಕೀಲರ ವಾದ ಆಲಿಸಿದ್ದೇವೆ. ಇಲ್ಲಿ ಹಲವು ಮಹತ್ವದ ಕಾನೂನು ಪ್ರಶ್ನೆಗಳು ಉದ್ಭವಿಸುತ್ತಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಾಲ್ಕು ವಾರಗಳಲ್ಲಿ ಪ್ರತಿವಾದ ಸಲ್ಲಿಸಬೇಕು. ಸಾಮಾನ್ಯವಾಗಿ ದೋಷಾರೋಪಿತ ಅಥವಾ ವಿಚಾರಣಾಧೀನ ಕೈದಿಯನ್ನು ಬಿಡುಗಡೆ ಮಾಡಿದ ಆದೇಶಗಳಿಗೆ, ಆ ವ್ಯಕ್ತಿಯ ವಾದವನ್ನು ಕೇಳದೆ ಈ ನ್ಯಾಯಾಲಯ ತಡೆ ನೀಡುವುದಿಲ್ಲ ಎಂಬ ಅರಿವು ನಮಗಿದೆ. ಆದರೆ, ಈ ಪ್ರಕರಣದ ವಿಶಿಷ್ಟ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ - ಪ್ರತ್ಯೇಕ ಅಪರಾಧಕ್ಕಾಗಿ ದೋಷಿ ಎಂದು ಸಾಬೀತಾಗಿರುವ ಆರೋಪಿ - ಡಿಸೆಂಬರ್ 23ರ ದೆಹಲಿ ಹೈಕೋರ್ಟ್ ಆದೇಶ ಜಾರಿಗೆ ತಡೆ ನೀಡಲಾಗುತ್ತಿದೆ. ಹೀಗಾಗಿ ಪ್ರತಿವಾದಿಯನ್ನು ಆ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದಿಲ್ಲ,” ಎಂದು ನ್ಯಾಯಾಲಯ ವಿವರಿಸಿತು.
ಇದೇ ವೇಳೆ, ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆಯ ಕಾಯಿದೆಯ (ಪೋಕ್ಸೊ ಕಾಯಿದೆ) ಸೆಕ್ಷನ್ 5 ಅಡಿಯಲ್ಲಿ ‘ಸಾರ್ವಜನಿಕ ಸೇವಕ’ ಎಂಬ ಪದಕ್ಕೆ ದೆಹಲಿ ಹೈಕೋರ್ಟ್ ನೀಡಿದ ವ್ಯಾಖ್ಯಾನ ತಪ್ಪಾಗಿರಬಹುದೆಂಬ ಆತಂಕವನ್ನೂ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿತು. ಆ ವ್ಯಾಖ್ಯಾನದಿಂದ ಕಾನೂನು ರೂಪಿಸುವವರು (ಶಾಸಕರು) ಹೊರಗುಳಿಯುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತಿಳಿಸಿತು.
“ಈ ಕಾನೂನು ವಿಚಾರವನ್ನು ಪರಿಗಣಿಸುವ ಅಗತ್ಯವಿದೆ. ಈ ಆದೇಶ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳು ಅತ್ಯುತ್ತಮ ನ್ಯಾಯಮೂರ್ತಿಗಳಾಗಿದ್ದಾರೆ. ಆದರೆ, ನಾವೆಲ್ಲರೂ ತಪ್ಪು ಮಾಡುವ ಸಾಧ್ಯತೆ ಇದೆ! ಪೋಕ್ಸೊ ಕಾಯಿದೆಯಡಿ ‘ಸಾರ್ವಜನಿಕ ಹುದ್ದೆಯಲ್ಲಿರುವವರುʼ ಎಂಬ ವ್ಯಾಖ್ಯಾನವನ್ನು ಗಮನಿಸಿ. ಈ ಕಾಯಿದೆಯಡಿ ಒಬ್ಬ ಪೇದೆ ಸಾರ್ವಜನಿಕ ಸೇವಕನಾಗಬಹುದು, ಆದರೆ ವಿಧಾನಸಭಾ ಸದಸ್ಯರನ್ನು ಹೊರಗಿಡುವಂತಹ ಆತಂಕ ಎದುರಾಗಿದೆ,” ಎಂದು ಸುಪ್ರೀಂ ಕೋರ್ಟ್ ತಪ್ಪು ವ್ಯಾಖ್ಯಾನದೆಡಡೆಗೆ ಬೆರಳು ಮಾಡಿತು.
ಸಿಬಿಐ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದರು. ಇದು ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಘೋರ ಅತ್ಯಾಚಾರ ಪ್ರಕರಣವಾಗಿದ್ದು, ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯಿದೆಯ 5 ಮತ್ತು 6ನೇ ಸೆಕ್ಷನ್‌ಗಳ ಅಡಿಯಲ್ಲಿ ಎರಡು ಅಂಶಗಳಲ್ಲಿ ಸೆಂಗರ್ ದೋಷಿಯಾಗಿದ್ದಾರೆ ಎಂದು ಅವರು ತಿಳಿಸಿದರು. ಅಪರಾಧ ನಡೆದ ವೇಳೆ ಸಂತ್ರಸ್ತೆ 15 ವರ್ಷ 10 ತಿಂಗಳ ವಯಸ್ಸಿನವಳಾಗಿದ್ದಳು ಎಂಬುದು ದಾಖಲೆಯಲ್ಲಿದೆ ಎಂದು ಸಿಬಿಐ ಒತ್ತಿಹೇಳಿತು.
ಸೆಂಗರ್ ಈಗಾಗಲೇ ಗರಿಷ್ಠ 7 ವರ್ಷಗಳ ಶಿಕ್ಷೆ ಅನುಭವಿಸಿದ್ದಾರೆ ಎಂಬ ಕಾರಣ ನೀಡಿ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿದ್ದನ್ನು ಸಿಬಿಐ ತೀವ್ರವಾಗಿ ವಿರೋಧಿಸಿತು. ತಿದ್ದುಪಡಿಯ ನಂತರ ಇಂತಹ ಅಪರಾಧಗಳಿಗೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆ ಇದೆ ಎಂದು ಸಿಬಿಐ ವಾದಿಸಿದರೂ, ಆ ತಿದ್ದುಪಡಿ ಅಪರಾಧ ನಡೆದ ಬಳಿಕ ಜಾರಿಗೆ ಬಂದಿರುವುದರಿಂದ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.
ಇದೇ ವೇಳೆ, ಸಂತ್ರಸ್ತೆ ಅಪ್ರಾಪ್ತ ವಯಸ್ಕಳಾಗಿರುವ ಕಾರಣ ‘ಸಾರ್ವಜನಿಕ ಸೇವಕ’ ಎಂಬ ವ್ಯಾಖ್ಯಾನ ನಿರ್ಣಾಯಕವಲ್ಲ ಎಂದು ಸಿಬಿಐ ವಾದಿಸಿತು. ಪ್ರಭಾವಿ ಹುದ್ದೆಯಲ್ಲಿರುವ ವ್ಯಕ್ತಿಯಿಂದ ನಡೆಯುವ ಲೈಂಗಿಕ ದೌರ್ಜನ್ಯವನ್ನು ಗಂಭೀರ ಅಪರಾಧವೆಂದು ಪರಿಗಣಿಸಬೇಕು ಎಂದು ತಿಳಿಸಿದ ಅದು, ಸೆಂಗರ್ ಸಾರ್ವಜನಿಕ ಸೇವಕರಾಗಿದ್ದಾರೆಯೇ ಇಲ್ಲವೇ ಎಂಬುದು ಮುಖ್ಯವಲ್ಲ ಎಂದು ಹೇಳಿತು. ಅಲ್ಲದೆ, ಸೆಂಗರ್ ಸಂತ್ರಸ್ತೆಯ ತಂದೆಯ ಕೊಲೆ ಪ್ರಕರಣದಲ್ಲಿಯೂ ದೋಷಿಯಾಗಿದ್ದು, ಆ ಕಾರಣಕ್ಕೆ ಇನ್ನೂ ಜೈಲಿನಲ್ಲಿದ್ದಾರೆ ಎಂಬುದನ್ನು ಸಿಬಿಐ ಗಮನಕ್ಕೆ ತಂದಿತು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ, ಸೆಂಗರ್ ಪರ ವಕೀಲರಾದ ಸಿದ್ಧಾರ್ಥ ದವೆ ಹಾಗೂ ಎನ್ ಹರಿಹರನ್ ಅವರು, ‘ಸಾರ್ವಜನಿಕ ಸೇವಕ’ ಎಂಬ ವ್ಯಾಖ್ಯಾನದ ಆಧಾರದ ಮೇಲೆಯೇ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಾದಿಸಿದರು. ಒಂದು ದಂಡಾತ್ಮಕ ಕಾಯಿದೆ ಮತ್ತೊಂದು ಕಾಯಿದೆಯಿಂದ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನೂ ಅವರು ಹೇಳಿದರು.
ವಾದಗಳನ್ನು ಆಲಿಸಿದ ನ್ಯಾಯಾಲಯ ಪ್ರಕರಣದಲ್ಲಿ ಗಂಭೀರ ಕಾನೂನು ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟಿತು ದೆಹಲಿ ಹೈಕೋರ್ಟ್ ಆದೇಶದ ಜಾರಿಗೆ ತಡೆ ನೀಡಿತು.