ಸುದ್ದಿಗಳು

ತಿಹಾರ್ ಜೈಲಿನಿಂದ ಅಫ್ಜಲ್ ಗುರು, ಮಕ್ಬೂಲ್ ಸಮಾಧಿ ತೆರವಿಗೆ ದೆಹಲಿ ಹೈಕೋರ್ಟ್ ನಕಾರ: ಯಾತ್ರಾಸ್ಥಳವಾಗಬಾರದು ಎಂದ‌ ಪೀಠ

ಪಿಐಎಲ್ ತಿರಸ್ಕರಿಸಿದ ನ್ಯಾಯಾಲಯ ಸಮಾಧಿ ಇರುವ ಸ್ಥಳವನ್ನು ಯಾತ್ರಾಸ್ಥಳವಾಗಲು ಅಥವಾ ಮೃತರನ್ನು ವೈಭವೀಕರಿಸಲು ಅವಕಾಶ ನೀಡಬಾರದು ಎಂಬ ಅರ್ಜಿದಾರರ ವಾದವನ್ನು ಒಪ್ಪಿಕೊಂಡಿತು.

Bar & Bench

ದೆಹಲಿಯ ತಿಹಾರ್ ಜೈಲಿನಿಂದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರಾದ ಮಕ್ಬೂಲ್ ಭಟ್ ಮತ್ತು ಅಫ್ಜಲ್ ಗುರು ಅವರ ಸಮಾಧಿ ತೆರವುಗೊಳಿಸುವಂತೆ ಕೋರಿ ವಿಶ್ವ ವೇದಿಕ್‌ ಸನಾತನ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅರ್ಜಿಯನ್ನು ಆಲಿಸಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಇದು ಕಾನೂನು ಸುವ್ಯವಸ್ಥೆ ಪರಿಗಣಿಸಿ ಸರ್ಕಾರ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿರುವುದರಿಂದ ಸಮಾಧಿಗಳನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಆದರೆ, ಸಮಾಧಿಗಳು ಯಾತ್ರಾಸ್ಥಳವಾಗಲು ಬಿಡಬಾರದು ಅಥವಾ ಮರಣದಂಡನೆಗೊಳಗಾದ ಇಬ್ಬರನ್ನೂ ವೈಭವೀಕರಿಸಲು ಅವಕಾಶ ಇರಬಾರದು ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.

ಈ ಮಧ್ಯೆ, ಸಮಾಧಿ ಸ್ಥಳವನ್ನು ವೈಭವೀಕರಿಸಲಾಗುತ್ತಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಒದಗಿಸಬೇಕೆ ವಿನಾ ವೃತ್ತಪತ್ರಿಕೆ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಬಾರದು ಎಂದು ನ್ಯಾಯಾಲಯ ಹೇಳಿದೆ.

ತಿಹಾರ್‌ ಜೈಲಿನಲ್ಲಿರುವ ಶಿಕ್ಷೆಗೊಳಪಟ್ಟ ಭಯೋತ್ಪಾದಕರ ಸಮಾಧಿಗಳು ತೀವ್ರವಾದಿ ಯಾತ್ರಾಸ್ಥಳವಾಗಿ ಮಾರ್ಪಟ್ಟಿದ್ದು, ಉಗ್ರವಾದಿ ಶಕ್ತಿಗಳು ಅಲ್ಲಿ ನೆರೆದು ಗೌರವ ಸೂಚಿಸುತ್ತಿದ್ದಾರೆ ಎಂದು ವಾದಿಸಿದ್ದರು.

ಮುಂದುವರೆದು, "ಇದು ರಾಷ್ಟ್ರೀಯ ಭದ್ರತೆಗೆ ಸಂಚಕಾರ ತರುವುದಲ್ಲದೆ, ಸಾಂವಿಧಾನಿಕ ತತ್ವಗಳಾದ ಜಾತ್ಯತೀತತೆ ಮತ್ತು ಕಾನೂನಾತ್ಮಕ ಆಡಳಿತಕ್ಕೆ ವಿರುದ್ಧವಾಗಿ ಭಯೋತ್ಪಾದನೆಯನ್ನು ಅನುಮತಿಸುತ್ತದೆ" ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ಅಲ್ಲದೆ, ಮಕ್ಬೂಲ್‌ ಭಟ್‌ ಮತ್ತು ಅಫ್ಜಲ್‌ ಗುರು ಅವರ ಮೃತದೇಹದ ಅವಶೇಷಗಳನ್ನು ಜೈಲಿನಿಂದ ತೆರವುಗೊಳಿಸಿ ರಹಸ್ಯ ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಸಹ ಅರ್ಜಿಯಲ್ಲಿ ಕೋರಲಾಗಿತ್ತು.

ಅಂತಿಮವಾಗಿ ನ್ಯಾಯಾಲಯವು ಅರ್ಜಿದಾರರು ಕಾನೂನು ವ್ಯಾಪ್ತಿಗೊಳಪಟ್ಟು ಪ್ರಕರಣವನ್ನು ನಿರೂಪಿಸಬೇಕು ಎಂದಿತು. ಅರ್ಜಿದಾರರ ಯಾವ ಹಕ್ಕುಮೊಟಕುಗೊಂಡಿದೆ ಎಂದು ಕೇಳಿತು. ಅಲ್ಲದೆ, ಇದು ನೀತಿ-ನಿರೂಪಣೆಯ ವಿಷಯವಾಗಿದೆ. ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿತು.

ಅಲ್ಲದೆ ಜೈಲಿನೊಳಗೆ ಸಮಾಧಿ ಮಾಡುವುದನ್ನು ನಿಷೇಧಿಸುವ ಯಾವುದೇ ಸ್ಪಷ್ಟ ಕಾನೂನು ಇಲ್ಲವೇ ನಿಯಮವಿದೆಯೇ ಎಂದು ಪೀಠ ಇದೇ ವೇಳೆ ಪ್ರಶ್ನಿಸಿತು. ಸಮಾಧಿಗಳು ಈಗಾಗಲೇ 12 ವರ್ಷಗಳಿಂದ ಇದ್ದರೂ ಈಗ ಯಾಕೆ ಪ್ರಶ್ನೆ ಎತ್ತಲಾಗುತ್ತಿದೆ ಎಂದು ಅದು ಕೇಳಿತು.

ಕಾನೂನು ಸುವ್ಯವಸ್ಥೆ ಸಮಸ್ಯೆ ತಪ್ಪಿಸಲು ಜೈಲಿನೊಳಗೇ ಸಮಾಧಿ‌ ಮಾಡಲು ಸರ್ಕಾರ ಮೊದಲಿನಿಂದಲೂ ನಿರ್ಧರಿಸಿದೆ ಎಂದು ನ್ಯಾಯಾಲಯ ಹೇಳಿತು.

ಈ ವೇಳೆ ಅರ್ಜಿದಾರರು ಸಮಾಧಿ ಸ್ಥಳಗಳು ಇತರರು ಭೇಟಿ ನೀಡುವ ಮತ್ತು ವೈಭವೀಕರಿಸುವ ತಾಣವಾಗಿದೆಯೇ ಎಂಬ ಬಗ್ಗೆ ದಾಖಲೆಯೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಅರ್ಜಿಯನ್ನು ಹಿಂಪಡೆದರು.