ಅಫ್ಜಲ್ ಗುರು ಶ್ಲಾಘನೆ, ನ್ಯಾಯಮೂರ್ತಿಗಳ‌ ವಿರುದ್ಧ ಟೀಕೆ: ಎಫ್ಐಆರ್ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

ತಮ್ಮ ವಿರುದ್ಧ ದಾಖಲಾಗಿರುವ ವಿವಿಧ ಎಫ್ಐಆರ್‌ಗಳನ್ನು ಕ್ರೋಢೀಕರಿಸಿ, ಜಂಟಿ ವಿಚಾರಣೆಗಾಗಿ ಮಧುರೈನ ಒಂದೇ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆರೋಪಿಗಳು ಮಾಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.
Supreme Court
Supreme Court
Published on

ಭಯೋತ್ಪಾದಕ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನು ಹೊಗಳಿದ್ದ ಹಾಗೂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಅಸಂಸದೀಯ ಭಾಷೆ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ತೌಹೀದ್ ಜಮಾತ್‌ನ (ಟಿಎನ್‌ಟಿಜೆ) ಇಬ್ಬರು ಸದಸ್ಯರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರಾಕರಿಸಿತು [ರಹಮತುಲ್ಲಾ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಅರ್ಜಿದಾರರು ತಮ್ಮ ಭಾಷಣಗಳಲ್ಲಿ ಬಳಸಿದ ಭಾಷೆ ಅತ್ಯಂತ ಆಕ್ಷೇಪಾರ್ಹವಾಗಿದ್ದು, ದ್ವೇಷ ಭಾಷಣದ ಅಗತ್ಯ ಅಂಶಗಳನ್ನು ಸ್ಪಷ್ಟವಾಗಿ ಒಳಗೊಂಡಿದೆ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್  ಮತ್ತು  ನ್ಯಾಯಮೂರ್ತಿ ಸಂದೀಪ್ ಮೆಹ್ತಾ  ಅವರನ್ನೊಳಗೊಂಡ ಪೀಠ ತಿಳಿಸಿತು.

Also Read
ಮದರಸಾದಲ್ಲಿ ಉಗ್ರ ಚಟುವಟಿಕೆ ಆರೋಪ: ಎನ್‌ಸಿಪಿಸಿಆರ್‌ ಅಧ್ಯಕ್ಷ ಕಾನುಂಗೋ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಆದರೆ, ತಮ್ಮ ವಿರುದ್ಧ ದಾಖಲಾಗಿರುವ ವಿವಿಧ ಎಫ್ಐಆರ್‌ಗಳನ್ನು ಕ್ರೋಢೀಕರಿಸಿ, ಜಂಟಿ ವಿಚಾರಣೆಗಾಗಿ ಮಧುರೈನ ಒಂದೇ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆರೋಪಿಗಳು ಮಾಡಿದ್ದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.

ಮಧುರೈನಲ್ಲಿ ಅನುಮತಿಯಿಲ್ಲದೆ ಆಯೋಜಿಸಲಾದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಭಾಷಣದಲ್ಲಿ ಅಫ್ಜಲ್ ಗುರುವನ್ನು ಹೊಗಳಲಾಗಿದ್ದು ವಿವಿಧ ಧಾರ್ಮಿಕ ಆಚರಣೆಗಳನ್ನು ಖಂಡಿಸಲಾಗಿ. ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಲಾಗಿದೆ ಎಂದು ಆರೋಪಿಸಲಾಗಿತ್ತು.

Also Read
[ಹಿಜಾಬ್ ತೀರ್ಪು] ನಟ ಚೇತನ್, ರಹಮತುಲ್ಲಾ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಎಜಿ ಸಮ್ಮತಿ

ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (ಮುಸ್ಲಿಂ ಮಹಿಳೆಯರು ಧರಿಸುವ ಶಿರವಸ್ತ್ರ) ನಿಷೇಧಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದಾಗ  ಆರೋಪಿಗಳು ನ್ಯಾಯಾಂಗವನ್ನು ಅವಹೇಳನ ಮಾಡಿದ್ದರು ಎಂದು ದೂರಲಾಗಿತ್ತು.

ಭಾಷಣದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ತಮಿಳುನಾಡಿನಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಒಂದು ಎಫ್‌ಐಆರ್‌ ದಾಖಲಾಗಿತ್ತು. ಒಂದೇ ಘಟನೆಗೆ ಸಂಬಂಧಿಸಿದಂತೆ ವಿವಿಧ ಎಫ್‌ಐಆರ್‌ಗಳನ್ನು ದಾಖಲಿಸುವುದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com