ರಾಷ್ಟ್ರ ರಾಜಧಾನಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಕುಸ್ತಿಪಟುವೊಬ್ಬರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಒಲಿಂಪಿಕ್‌ನಲ್ಲಿ ಕಂಚು, ಬೆಳ್ಳಿ ಪದಕ ಗಳಿಸಿ ದೇಶದ ಗಮನ ಸೆಳೆದಿದ್ದ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಮೇ 4ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಅನೂಪ್ ಜೈರಾಂ ಭಂಭಾನಿ ಅವರಿದ್ದ ಪೀಠ ತಿಳಿಸಿದೆ. ಫೆಬ್ರವರಿ 6ರಂದು ವಿಚಾರಣಾ ನ್ಯಾಯಾಲಯ ಸುಶೀಲ್ ಕುಮಾರ್‌ಗೆ ಜಾಮೀನು ನಿರಾಕರಿಸಿತ್ತು.
2021ರ ಮೇ ತಿಂಗಳಲ್ಲಿ ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ದಾಳಿ ಪ್ರಕರಣದ ನಂತರ ಸುಶೀಲ್ ಕುಮಾರ್ ಬಂಧಿತರಾಗಿದ್ದರು. ಆ ರಾತ್ರಿ ನಡೆದ ಘರ್ಷಣೆಯಲ್ಲಿ ಧನಕರ್ ಎಂಬ ಕುಸ್ತಿಪಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ಆಸ್ತಿ ವಿವಾದಕ್ಕೆ ಸಂಬಂಧಿಸಿದ್ದಾಗಿತ್ತು ಎಂದು ಆರೋಪಿಸಲಾಗಿತ್ತು. ಪೊಲೀಸರು ಕುಮಾರ್ ಅವರನ್ನು ಪ್ರಮುಖ ಆರೋಪಿಯಾಗಿ ಗುರುತಿಸಿ, ಕೊಲೆ ಮತ್ತು ಅಪರಾಧ ಸಂಚು ಆರೋಪ ಹೊರಿಸಿದ್ದಾರೆ.
ಈ ಹಿಂದೆ ಕುಮಾರ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ್ದರೂ, ನಂತರ ಸುಪ್ರೀಂ ಕೋರ್ಟ್ ಅದನ್ನು ರದ್ದುಪಡಿಸಿತ್ತು. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಮತ್ತು ನ್ಯಾಯಸಮ್ಮತ ವಿಚಾರಣೆ ನಡೆಯಬೇಕೆಂಬ ಕಾರಣಕ್ಕೆ ಅದು ಆ ನಿರ್ಧಾರ ತೆಗೆದುಕೊಂಡಿತ್ತು.
ಎಲ್ಲಾ ಸಾರ್ವಜನಿಕ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿರುವುದರಿಂದ ಜಾಮೀನು ಅರ್ಜಿಯನ್ನು ಮರುಪರಿಶೀಲಿಸಬಹುದು ಎಂದು ಕುಮಾರ್ ತಮ್ಮ ಹೊಸ ಅರ್ಜಿಯಲ್ಲಿ ವಾದಿಸಿದ್ದಾರೆ. ಆದರೆ ಈ ವಾದಕ್ಕೆ ಪೊಲೀಸರು ಮತ್ತು ಧನಕರ್ ಕುಟುಂಬದ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.