ನಟ ದಿಲೀಪ್ ದೌರ್ಜನ್ಯ ಎಸಗಿದ ಪ್ರಕರಣದ ವಿಚಾರಣೆ ವಿಳಂಬ: ಸೆಷನ್ಸ್ ನ್ಯಾಯಾಲಯದ ವರದಿ ಕೇಳಿದ ಕೇರಳ ಹೈಕೋರ್ಟ್

ಪತ್ರಕರ್ತರೊಬ್ಬರು ಸಿಜೆ ಅವರಿಗೆ ಪತ್ರ ಬರೆದು ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಂಗ ರಿಜಿಸ್ಟ್ರಾರ್ ಅವರು ಸೆಷನ್ಸ್ ನ್ಯಾಯಾಲಯದಿಂದ ವರದಿ ಕೇಳಿದ್ದರು.
Dileep and Kerala HC
Dileep and Kerala HC
Published on

ಮಲಯಾಳಂ ಸಿನಿಮಾ ನಟ ದಿಲೀಪ್ ಆರೋಪಿಯಾಗಿರುವ 2017ರಲ್ಲಿ ನಡೆದಿದ್ದ ನಟಿಯ ಮೇಲಿನ ದೌರ್ಜನ್ಯ ಪ್ರಕರಣದ ವಿಚಾರಣೆಯ ಸ್ಥಿತಿಗತಿ ಕುರಿತು ಕೇರಳ ಹೈಕೋರ್ಟ್ ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವರದಿ ಕೇಳಿದೆ.

ರೋಚಕ ಪ್ರಕರಣದ ವಿಚಾರಣೆ 7 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಇದ್ದು ಪತ್ರಕರ್ತ ಎಂ ಆರ್ ಅಜಯನ್  ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು  ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಂಗದ ರಿಜಿಸ್ಟ್ರಾರ್ ಅವರು ಸೆಷನ್ಸ್ ನ್ಯಾಯಾಲಯದಿಂದ ವರದಿ ಕೇಳಿದ್ದರು.

Also Read
ನಟಿ ಮೇಲೆ ಹಲ್ಲೆ ಪ್ರಕರಣ: ಸಿಬಿಐ ತನಿಖೆ ಕೋರಿ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್‌

ದುಷ್ಕರ್ಮಿಗಳ ಗುಂಪೊಂದು 2017ರಲ್ಲಿ, ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ವಾಹನದಲ್ಲಿ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿತ್ತು. ದಿಲೀಪ್ ವಿಚ್ಛೇದನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ನಟ ದಾಳಿಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.

ಜುಲೈ 2017ರಲ್ಲಿ, ದಿಲೀಪ್ ಅವರನ್ನು ಬಂಧಿಸಿ ಐಪಿಸಿ ಸೆಕ್ಷನ್ 366 (ಅಪಹರಣ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 376 ಡಿ (ಸಾಮೂಹಿಕ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಜಾಮೀನು ಪಡೆಯುವ ಅವರ ಮೊದಲ ಎರಡು ಪ್ರಯತ್ನಗಳನ್ನು ಕೇರಳ ಹೈಕೋರ್ಟ್ ಅಕ್ಟೋಬರ್ 2017 ರವರೆಗೆ ತಿರಸ್ಕರಿಸಿತ್ತು.   83 ದಿನಗಳ ಕಸ್ಟಡಿ  ನಂತರ ನ್ಯಾಯಾಲಯ ಅಂತಿಮವಾಗಿ ಅವರಿಗೆ ಜಾಮೀನು ನೀಡಿತ್ತು.

ನವೆಂಬರ್ 2019 ರಲ್ಲಿ,  ಹಲ್ಲೆಯ ವಿಡಿಯೋ ದೃಶ್ಯಗಳನ್ನು ಒಳಗೊಂಡಿರುವ ಮೆಮೊರಿ ಕಾರ್ಡ್‌ ಪ್ರತಿಯನ್ನು ತನಗೆ ನೀಡುವಂತೆ ಕೋರಿ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಭಾಗಶಃ ಪುರಸ್ಕರಿಸಿತ್ತು. ಮೆಮೊರಿ ಕಾರ್ಡ್‌ ಪ್ರತಿಯನ್ನು ಪಡೆಯಲು ಅವರಿಗೆ ಅನುಮತಿ ಇಲ್ಲದಿದ್ದರೂ, ಪರಿಣಾಮಕಾರಿ ಪ್ರತಿವಾದವನ್ನು ಮಂಡಿಸುವ ಸಲುವಾಗಿ - ಕೆಲವು ಎಚ್ಚರಿಕೆಗಳೊಂದಿಗೆ - ಅದರ  ವಸ್ತುವಿಷಯಗಳನ್ನು ಪರಿಶೀಲಿಸಲು ಅನುಮತಿ ನೀಡಲಾಗಿತ್ತು.

ಸುಮಾರು ಒಂದು ವರ್ಷದ ನಂತರ, ವಿವಿಧ ಕಾರಣಗಳಿಗಾಗಿ ಪ್ರಕರಣ ವಿಳಂಬವಾಗುತ್ತಿರುವುದಾಗಿಯೂ ಜೊತೆಗೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತು ವಿಶೇಷ ಪ್ರಾಸಿಕ್ಯೂಟರ್‌ ವಿರುದ್ಧ ನ್ಯಾಯಾಧೀಶರು ಕೆಲ ಆರೋಪ ಮಾಡುತ್ತಿರುವುದರಿಂದ ಪ್ರಕರಣವನ್ನು ಬೇರೆ ನ್ಯಾಯಾಧೀಶರಿಗೆ ಒಪ್ಪಿಸಲು ಪ್ರಾಸಿಕ್ಯೂಷನ್‌ ಅನುಮತಿ ಕೋರಿತ್ತು.

ವಿಚಾರಣೆಯನ್ನು ವರ್ಗಾಯಿಸುವಂತೆ ಪ್ರಾಸಿಕ್ಯೂಷನ್‌ ಮತ್ತು ಸಂತ್ರಸ್ತೆ ಇಬ್ಬರೂ ಬೇಡಿಕೆ ಇಟ್ಟರು. ಹೈಕೋರ್ಟ್ ಈ ಮನವಿಗಳನ್ನು ನವೆಂಬರ್ 2020ರಲ್ಲಿ ತಿರಸ್ಕರಿಸಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎ ಸುರೇಶನ್ ರಾಜೀನಾಮೆ ನೀಡಿದರು, 2021ರ ಡಿಸೆಂಬರ್‌ನಲ್ಲಿ ಅವರ ಉತ್ತರಾಧಿಕಾರಿ ಅನಿಲ್ ಕುಮಾರ್ ಕೂಡ ರಾಜೀನಾಮೆ ಸಲ್ಲಿಸಿದರು.

ನ್ಯಾಯಯುತ ವಿಚಾರಣೆ ಕೋರಿ ಸಂತ್ರಸ್ತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದ ನಂತರ, ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಕಾಲಾವಕಾಶವನ್ನು 6 ತಿಂಗಳವರೆಗೆ ವಿಸ್ತರಿಸುವಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತು. ಆದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ವಿಚಾರಣಾ ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿತು.

ಜನವರಿ 2022 ರಲ್ಲಿ, ಸಂತ್ರಸ್ತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಕರಣದಿಂದಾಗಿ ತಾನು ಅನುಭವಿಸಿದ ಸಂಕಷ್ಟಗಳನ್ನು ವಿವರಿಸಿದರು. ನಂತರ ತನಿಖೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

Also Read
ಕೊಲೆ ಸಂಚು ಪ್ರಕರಣ ರದ್ದತಿ ಕೋರಿ ಮಲಯಾಳಂ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ನಂತರ ರಾಜ್ಯ ಪ್ರಾಸಿಕ್ಯೂಷನ್ ಹಲ್ಲೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಗಡುವು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಪ್ರಕರಣದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ವಿಚಾರಣಾ ನ್ಯಾಯಾಲಯಕ್ಕೆ ಬಿಟ್ಟದ್ದು ಎಂದು ಹೇಳಿ ಸುಪ್ರೀಂ ಕೋರ್ಟ್ ಅದನ್ನು ವಿಲೇವಾರಿ ಮಾಡಿತು.

ದಿಲೀಪ್‌ 2025ರಲ್ಲಿ, ಮತ್ತೊಮ್ಮೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸುವವರೆಗೆ ಮೇಲ್ಮನವಿ  ಒಟ್ಟು ಆರು ವರ್ಷಗಳ ಕಾಲ ಬಾಕಿ ಇತ್ತು. ಏಪ್ರಿಲ್ 2025 ರಲ್ಲಿ, ನ್ಯಾಯಾಲಯದ ವಿಭಾಗೀಯ ಪೀಠ ದಿಲೀಪ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು .

Kannada Bar & Bench
kannada.barandbench.com