NIA 
ಸುದ್ದಿಗಳು

ವಿಚಾರಣೆ ಬಾಕಿ ಇರುವ ಎನ್ಐಎ ಪ್ರಕರಣಗಳ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಿಜಿಸ್ಟ್ರಿಗೆ ದೆಹಲಿ ಹೈಕೋರ್ಟ್ ಸೂಚನೆ

ಅಂತಹ ಪ್ರಕರಣಗಳ ವಸ್ತುಸ್ಥಿತಿ, ವಿಳಂಬಕ್ಕೆ ಕಾರಣಗಳನ್ನು ರಿಜಿಸ್ಟ್ರಿಯ ಪ್ರತಿಕ್ರಿಯೆ ಒಳಗೊಂಡಿರಬೇಕು ಎಂದು ನ್ಯಾ. ಮುಕ್ತಾ ಗುಪ್ತ ತಿಳಿಸಿದರು.

Bar & Bench

ದೆಹಲಿಯ ವಿಶೇಷ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಿದ ಪ್ರಕರಣಗಳ ವಸ್ತುಸ್ಥಿತಿ ವರದಿಯನ್ನು ವಿವರವಾಗಿ ನೀಡುವಂತೆ ದೆಹಲಿ ಹೈಕೋರ್ಟ್‌ ತನ್ನ ರಿಜಿಸ್ಟ್ರಿಗೆ ಇತ್ತೀಚೆಗೆ ನಿರ್ದೇಶಿಸಿದೆ. (ಮಂಜೆರ್ ಇಮಾಮ್ ಮತ್ತು ಆಂತರಿಕ ಗೃಹಸಚಿವಾಲಯ ಭದ್ರತಾ ವಿಭಾಗದ ಮೂಲಕ ಕೇಂದ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣ).

ಅಂತಹ ಪ್ರಕರಣಗಳ ವಸ್ತುಸ್ಥಿತಿ, ವಿಳಂಬಕ್ಕೆ ಕಾರಣಗಳನ್ನು ರಿಜಿಸ್ಟ್ರಿಯ ಪ್ರತಿಕ್ರಿಯೆ ಒಳಗೊಂಡಿರಬೇಕು ಎಂದು ನ್ಯಾ. ಮುಕ್ತಾ ಗುಪ್ತ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು. ಕಳೆದ ಎಂಟು ವರ್ಷಗಳಿಂದ ಬಂಧನದಲ್ಲಿರುವ ಎನ್‌ಐಎ ಆರೋಪಿ ಮಂಜೆರ್ ಇಮಾಮ್ ಎಂಬುವವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಾಕಿ ಇರುವ ಅನೇಕ ಎನ್‌ಐಎ ಪ್ರಕರಣಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಹೇಳಿತು. "ಏಕೆ ವಿಳಂಬವಾಗಿದೆ ಎಂದು ನೀವು ತನಿಖೆ ಮಾಡಬೇಕಾಗಿದೆ" ಎಂಬುದಾಗಿ ಪೀಠ ತಿಳಿಸಿದೆ.

31 ಜುಲೈ, 2021ರಂದು ಸಲ್ಲಿಸಿದ ಪ್ರತಿಕ್ರಿಯೆ ಅಫಿಡವಿಟ್‌ ಪ್ರಕಾರ, ಎನ್‌ಐಎ ತನಿಖೆ ನಡೆಸಿದ ವಿಚಾರಣೆಗಳಲ್ಲಿ ನವದೆಹಲಿಯ 03ನೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಸತ್ರ ನ್ಯಾಯಾಧೀಶರೆದುರು ಕ್ರಮವಾಗಿ ಒಟ್ಟು 262 ಮತ್ತು 449 ಪ್ರಕರಣಗಳು ಬಾಕಿ ಇದ್ದು ಎನ್‌ಐಎ ಕಾಯಿದೆಯಡಿ ಕ್ರಮವಾಗಿ 12 ಮತ್ತು 25 ಪ್ರಕರಣಗಳನ್ನು ಈ ಎರಡು ನ್ಯಾಯಾಲಯಗಳು ವಿಚಾರಣೆ ನಡೆಸಬೇಕಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.

ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಎನ್ಐಎ ಪ್ರಕರಣಗಳ ವಿಳಂಬಕ್ಕೆ ಕಾರಣಗಳು ಮತ್ತು ವಿಚಾರಣೆಯ ವಿವಿಧ ಹಂತಗಳನ್ನು ಒದಗಿಸಿ ಹೈಕೋರ್ಟ್‌ ಅಧಿಕಾರಿಗಳು ನಾಲ್ಕು ವಾರಗಳ ಒಳಗಾಗಿ ಅಫಿಡವಿಟ್‌ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಆರೋಪಿ ಪರವಾಗಿ ವಾದ ಮಂಡಿಸಿದ ವಕೀಲರಾದ ಕಾರ್ತಿಕ್ ಮುರುಕುಟ್ಲಾ ಮತ್ತು ಅಬೂಬಕರ್ ಸಬ್ಬಕ್, ಎನ್ಐಎ ಪ್ರಕರಣಗಳ ಬಾಕಿಯಲ್ಲಿ ಕೆಲ ವ್ಯತ್ಯಾಸವಿದ್ದು ನ್ಯಾಯಾಲಯದ ಮುಂದೆ ಎನ್ಐಎ ಸಲ್ಲಿಸಿದ ಅಫಿಡವಿಟ್ ನಲ್ಲಿ ಅದನ್ನು ಹೇಳಲಾಗಿದೆ ಎಂದರು. ಇದೇ ವೇಳೆ ದೆಹಲಿ ಹೈಕೋರ್ಟ್‌ ಪರ ಹಾಜರಾದ ವಕೀಲ ಗೌರವ್ ಅಗರ್‌ವಾಲ್ ಅವರು, ಪಟಿಯಾಲ ಹೌಸ್ ನ್ಯಾಯಾಲಯದಲ್ಲಿರುವ ಎರಡು ವಿಶೇಷ ನ್ಯಾಯಾಲಯಗಳು ಎನ್‌ಐಎ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅವುಗಳ ನೇತೃತ್ವ ವಹಿಸಿದ್ದಾರೆ ಎಂದರು. ಬಳಿಕ ಪ್ರಕರಣಗಳ ವಿವರ ಮತ್ತು ಅವುಗಳ ವಿಳಂಬಕ್ಕೆ ಕಾರಣಗಳನ್ನು ಒದಗಿಸಲು ನ್ಯಾಯಾಲಯ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಅವರು ಕೋರಿದರು.

ಈ ಹಿಂದೆ ನ್ಯಾಯಾಲಯ ಜಂಟಿ ಕಾರ್ಯದರ್ಶಿ, ಆಂತರಿಕ ಭದ್ರತಾ ವಿಭಾಗ, ಗೃಹ ವ್ಯವಹಾರಗಳ ಸಚಿವಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ದೆಹಲಿ ಸರ್ಕಾರದ ಮೂಲಕ ಪ್ರತಿಕ್ರಿಯೆಗಳನ್ನು ಕೋರಿತ್ತು.

ದೇಶದ ವಿವಿಧ ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಂಡಿಯನ್ ಮುಜಾಹಿದ್ದೀನ್‌ನ ಕೆಲ ಸದಸ್ಯರೊಂದಿಗೆ ಒಳಸಂಚು ನಡೆಸಿದ್ದಕ್ಕೆ ಸಂಬಂಧಿಸಿದಂತೆ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ) ಮತ್ತು ಐಪಿಸಿಯ (ಭಾರತೀಯ ದಂಡ ಸಂಹಿತೆ) ವಿವಿಧ ಸೆಕ್ಷನ್ಗಳ ಅಡಿ ಆರೋಪ ಎದುರಿಸುತ್ತಿರುವ ಮಂಜೆರ್‌ ಇಮಾಮ್ ಪರವಾಗಿ ಈ ಮನವಿ ಸಲ್ಲಿಸಲಾಗಿತ್ತು.

"ಅರ್ಜಿದಾರರು (ಇಮಾಮ್) ಇಲ್ಲಿಯವರೆಗೆ ಸುಮಾರು ಎಂಟು ವರ್ಷಗಳ ಕಾಲ ಬಂಧನದಲ್ಲಿದ್ದು ಪ್ರಕರಣದಲ್ಲಿ ಇನ್ನೂ ಆರೋಪಗಳು ನಿಗದಿಯಾಗಿಲ್ಲ.. 2014ರಲ್ಲಿಯೇ ಪ್ರಕರಣದ ನಿಗದಿ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಇಲ್ಲಿಯವರೆಗೆ ಅವು ಬಾಕಿ ಉಳಿದಿವೆ. ಪ್ರಸ್ತುತ ವೇಗದಲ್ಲಿ ವಿಚಾರಣೆ ನಡೆದರೆ 24 ಆಪಾದಿತ ವ್ಯಕ್ತಿಗಳ ವಿಚಾರಣೆ ಪೂರ್ಣಗೊಳಿಸಲು ಕನಿಷ್ಠ ಎಂಟು ವರ್ಷ ತೆಗೆದುಕೊಳ್ಳುವ ಸಾಧ್ಯತೆಯಿದೆ“ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಎನ್‌ಐಎ ಪ್ರಕರಣಗಳ ವಿಚಾರಣೆಗೆಂದು ಕೇವಲ ಎರಡೇ ನ್ಯಾಯಾಲಯಗಳು ಅಸ್ತಿತ್ವದಲ್ಲಿರುವುದರಿಂದ ಆರೋಪಿಗಳ ವಿಚಾರಣೆ ವಿಳಂಬವಾಗುತ್ತಿದೆ. ಐಪಿಸಿ ವಿಷಯಗಳು ಮತ್ತು ಜಾಮೀನು ಅರ್ಜಿಗಳಂತಹ ಎನ್‌ಐಎಗೆ ಸಂಬಂಧಪಡದ ವಿಷಯಗಳ ವಿಚಾರಣೆಯಿಂದಾಗಿ ಇವು ಅಧಿಕ ಕೆಲಸದ ಹೊರೆಯೊಂದಿಗೆ ನಿಯಮಿತ ನ್ಯಾಯಾಲಯಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರಕರಣವನ್ನು ಹೈಕೋರ್ಟ್‌ ಅಕ್ಟೋಬರ್ 22ರಂದು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.