ಸುದ್ದಿಗಳು

ಸಲಿಂಗ ವಿವಾಹ ಪರಿಗಣನೆ ಮನವಿ ಮುಂದೂಡಿದ ದೆಹಲಿ ಹೈಕೋರ್ಟ್‌; ನೋಂದಣಿ ಪತ್ರ ಇಲ್ಲವೆಂದು ಯಾರೂ ಸಾಯುತ್ತಿಲ್ಲ ಎಂದ ಕೇಂದ್ರ

Bar & Bench

ಹಿಂದೂ ವಿವಾಹ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯಿದೆ ಅಡಿ ಸಲಿಂಗ ವಿವಾಹವನ್ನು ಗುರುತಿಸುವಂತೆ ಕೋರಿದ್ದ ಮನವಿಯ ವಿಚಾರಣೆಯನ್ನು ಜುಲೈ 6ರವರೆಗೆ ದೆಹಲಿ ಹೈಕೋರ್ಟ್‌ ಸೋಮವಾರ ಮುಂದೂಡಿದೆ (ಅಭಿಜಿತ್‌ ಐಯ್ಯರ್‌ ಮಿತ್ರಾ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ, ಡಾ. ಕವಿತಾ ಅರೋರಾ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ, ವೈಭವ್‌ ಜೈನ್‌ ಮತ್ತು ಇತರರು ವರ್ಸಸ್‌ ಭಾರತ ಸರ್ಕಾರ).

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುವುದು ಎಂದು ಹೈಕೋರ್ಟ್‌ ಹೊರಡಿಸಿರುವ ಸುತ್ತೋಲೆಯನ್ನು ಆಧರಿಸಿ ಕೇಂದ್ರ ಸರ್ಕಾರ ಪ್ರಕರಣದ ವಿಚಾರಣೆ ಮುಂದೂಡುವಂತೆ ಕೋರಿತ್ತು.

ನ್ಯಾಯಮೂರ್ತಿಗಳಾದ ರಾಜೀವ್‌ ಸಹಾಯ್‌ ಎಂಡ್‌ಲಾ ಮತ್ತು ಅಮಿತ್‌ ಬನ್ಸಲ್‌ ಅವರಿದ್ದ ವಿಭಾಗೀಯ ಪೀಠಕ್ಕೆ ವೈಯಕ್ತಿಕ ವಿವರಣೆ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಕಾನೂನು ಅಧಿಕಾರಿಗಳು ಕೋವಿಡ್‌ ಸಂಬಂಧಿ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಸರ್ಕಾರವಾಗಿ ನಮ್ಮ ಗಮನ ವಾಸ್ತವದ ಅತ್ಯಂತ ತುರ್ತು ವಿಷಯಗಳತ್ತ ಮಾತ್ರ ಇದೆ” ಎಂದರು.

“ತುರ್ತಿಗೆ ಸಂಬಂಧಿಸಿದಂತೆ ಸರ್ಕಾರವು ತಟಸ್ಥವಾಗಿರಬೇಕು. ಅದನ್ನು ನ್ಯಾಯಾಲಯ ನಿರ್ಧರಿಸಲಿದೆ” ಎಂದು ಹಿರಿಯ ವಕೀಲ ಸೌರಬ್‌ ಕಿರ್ಪಾಲ್‌ ಹೇಳಿದರು.

ದೇಶದಲ್ಲಿರುವ ಲಕ್ಷಾಂತರ ಮಂದಿಗೆ ಇದರಿಂದ ಸಮಸ್ಯೆಯಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ನಡೆಸಬೇಕಿದೆ ಎಂದು ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ವಾದಿಸಿದರು. “ವೈದ್ಯಕೀಯ ಚಿಕಿತ್ಸೆ, ಹಾಸ್ಪತ್ರೆಗಳಲ್ಲಿ ನಮ್ಮನ್ನು ಕೈಬಿಡಲಾಗಿದೆ” ಎಂದರು.

ಆಗ ಮಧ್ಯಪ್ರವೇಶಿಸಿದ ಎಸ್‌ಜಿ ತುಷಾರ್‌ ಮೆಹ್ತಾ ಅವರು, “ಆಸ್ಪತ್ರೆಗಳಲ್ಲಿ ನಿಮ್ಮ ವಿವಾಹ ನೋಂದಣಿ ಪತ್ರ ಬೇಕಿಲ್ಲ… ವಿವಾಹ ನೋಂದಣಿ ಪತ್ರ ಇಲ್ಲ ಎಂದು ಯಾರೂ ಸಾಯುತ್ತಿಲ್ಲ” ಎಂದರು.

ಅರ್ಜಿಗಳನ್ನು ಆಲಿಸಿದ ವಿಭಾಗೀಯ ಪೀಠದ ಪಟ್ಟಿಗೆ ಸಂಬಂಧಿಸಿದಂತೆಯೂ ಮೆಹ್ತಾ ವಿಷಯ ಪ್ರಸ್ತಾಪಿಸಿದರು. ಮುಖ್ಯ ನ್ಯಾಯಮೂರ್ತಿ ಅವರಿದ್ದ ಪೀಠವು ಹಾಲಿ ಪೀಠಕ್ಕೆ ಪ್ರಕರಣ ವರ್ಗಾಯಿಸಿದೆ ಎಂದು ಮೇನಕಾ ಹೇಳಿದರು.

ರೋಸ್ಟರ್‌ ವಿಚಾರದಲ್ಲಿ ಸ್ಪಷ್ಟತೆ ಪಡೆದುಕೊಂಡ ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ನಡೆಸುವಂತೆ ಕಿರ್ಪಾಲ್‌ ಕೋರಿದರು. ಆದರೆ, ಪೀಠವು ವಿಚಾರಣೆಯನ್ನು ಜುಲೈಗೆ ಮುಂದೂಡಿತು. ರೋಸ್ಟರ್‌ಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಸ್ಪಷ್ಟತೆ ಪಡೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ರ ಅಡಿ ಸಲಿಂಗಕಾಮ ಅಪರಾಧವಲ್ಲ ಎಂದಿದ್ದರೂ ಸಲಿಂಗ ವಿವಾಹ ಮೂಲಭೂತ ಹಕ್ಕಲ್ಲ ಎಂದು ಕೇಂದ್ರ ಸರ್ಕಾರ ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಸಂವಿಧಾನದ 21ನೇ ವಿಧಿಯಡಿ ಬರುವ ಮೂಲಭೂತ ಹಕ್ಕುಗಳು ಕಾನೂನಿನ ಕಾರ್ಯವಿಧಾನಕ್ಕೆ ಒಳಪಟ್ಟಿದ್ದು ಸಲಿಂಗ ವಿವಾಹಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕಿಗೆ ಅದನ್ನು ವಿಸ್ತರಿಸಲಾಗದು ಎಂದು ಕೇಂದ್ರ ಹೇಳಿದೆ.