ಸುದ್ದಿಗಳು

ಭಾರತದಲ್ಲಿ ವಕೀಲನಾಗಿ ನೋಂದಣಿ: ಕೊರಿಯಾ ಪ್ರಜೆಯ ಅರ್ಜಿ ಪುರಸ್ಕರಿಸಿದ ದೆಹಲಿ ಹೈಕೋರ್ಟ್

ದೆಹಲಿ ವಕೀಲರ ಪರಿಷತ್ತಿನಲ್ಲಿ (ಬಿಸಿಡಿ) ನೋಂದಾಯಿಸಿಕೊಳ್ಳಲು ಜಂಗ್ ಅವರಿಗೆ ಅನುಮತಿ ನೀಡಬೇಕು ಎಂದು ನ್ಯಾಯಾಲಯ ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ನಿರ್ದೇಶನ ನೀಡಿತು.

Bar & Bench

ಭಾರತದಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳಲು ಅನುಮತಿ ಕೋರಿ ಕೊರಿಯಾದ ಪ್ರಜೆ ಡೇಯುಂಗ್ ಜಂಗ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ಪುರಸ್ಕರಿಸಿದೆ.

ಈ ಸಂಬಂಧ ಆದೇಶ ಪ್ರಕಟಿಸಿದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ದೆಹಲಿ ವಕೀಲರ ಪರಿಷತ್ತಿನಲ್ಲಿ (ಬಿಸಿಡಿ) ನೋಂದಾಯಿಸಿಕೊಳ್ಳಲು ಜಂಗ್‌ ಅವರಿಗೆ ಅನುಮತಿ ನೀಡಬೇಕು ಎಂದು ಭಾರತೀಯ ವಕೀಲರ ಪರಿಷತ್ತಿಗೆ ಸೂಚಿಸಿದರು.

ತಮ್ಮನ್ನು ವಕೀಲರಾಗಿ ನೋಂದಾಯಿಸಿಕೊಳ್ಳುವಂತೆ ಜಂಗ್‌ ಮಾಡಿದ್ದ ಮನವಿಯನ್ನು ಬಿಸಿಡಿ ಈ ಮೊದಲು ತಿರಸ್ಕರಿಸಿತ್ತು. ನಂತರ ಅವರು ಬಿಸಿಐಗೆ ಮನವಿ ಮಾಡಿದ್ದರು. ಬಿಸಿಐ ಕೂಡ ಅವರ ಮನವಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದರು.

ತಾವು ಭಾರತೀಯ ಶಿಕ್ಷಣ ಸಂಸ್ಥೆಯೊಂದರಿಂದ ಕಾನೂನು ಪದವಿ ಪಡೆದಿದ್ದು ಹೀಗಾಗಿ ತಮ್ಮನ್ನು ವಕೀಲರಾಗಿ ನೋಂದಾಯಿಸಿಕೊಳ್ಳದ ಬಿಸಿಡಿ ನಿರ್ಧಾರ ತಪ್ಪು ಎಂದು ಹೈಕೋರ್ಟ್‌ಗೆ ಅಹವಾಲು ಸಲ್ಲಿಸಿದರು.

ಕೊರಿಯಾದಲ್ಲಿ ಕಾನೂನು ಪದವಿ ಪಡೆದ ಭಾರತೀಯ ಪ್ರಜೆಯು ಕೊರಿಯಾದಲ್ಲಿ ಪ್ರಾಕ್ಟೀಸ್‌ ಮಾಡಲು ಅರ್ಹನಾಗುವುದಾದರೆ ವಕೀಲರ ಕಾಯಿದೆಯ ಸೆಕ್ಷನ್ 24ರ ಪ್ರಕಾರ, ಭಾರತದಲ್ಲಿ ಕಾನೂನು ಅಧ್ಯಯನ ಮಾಡಿದ ಕೊರಿಯನ್ ಪ್ರಜೆಗೆ ಭಾರತದಲ್ಲಿ ಪ್ರಾಕ್ಟೀಸ್‌ ಮಾಡಲು ಅವಕಾಶ ನೀಡಬೇಕು ಎಂದು ಅರ್ಜಿದಾರರು ತಿಳಿಸಿದ್ದರು.

ಸೆಕ್ಷನ್ 24ರ ಪ್ರಕಾರ ಭಾರತದ ನಾಗರಿಕರು ಯಾವ ದೇಶದಲ್ಲಿ ಕಾನೂನು ಪ್ರಾಕ್ಟೀಸ್‌ ಮಾಡಲು ಅನುಮತಿಸಲಾಗಿರುತ್ತದೆಯೋ, ಆ ದೇಶದ ಪ್ರಜೆಗಳು ಭಾರತದಲ್ಲಿಯೂ ವಕೀಲರಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.

ಆದರೆ ಬಿಸಿಐ “ಅರ್ಜಿದಾರರು ವಕೀಲರಾಗಿ ನೋಂದಾಯಿಸಿಕೊಂಡು ಬಳಿಕ ವೃತ್ತಿ ಸಂಬಂಧಿತ ದುಷ್ಕೃತ್ಯದಲ್ಲಿ ತೊಡಗಿ ಭಾರತ ತೊರೆದರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಆಸ್ಪದವಿರುವುದಿಲ್ಲ. ಜಂಗ್‌ ಅವರನ್ನು ನೋಂದಾಯಿಸಿಕೊಂಡರೆ ವಿದೇಶಿಯರು ಭಾರತೀಯ ವಕೀಲ ವರ್ಗ ಸೇರಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ. ಹಿಂದೆಂದೂ ಹೀಗಾಗಿರಲಿಲ್ಲʼ ಎಂದು ಆತಂಕ ವ್ಯಕ್ತಪಡಿಸಿತ್ತು.