Delhi High Court 
ಸುದ್ದಿಗಳು

ಆಟಿಸಂನಿಂದ ಬಳಲುತ್ತಿದ್ದ ಇಬ್ಬರು ಮಕ್ಕಳಿಗೆ ಸ್ಟೆಮ್‌ಸೆಲ್‌ ಚಿಕಿತ್ಸೆ ಮುಂದುವರೆಸಲು ದೆಹಲಿ ಹೈಕೋರ್ಟ್ ಅನುಮತಿ

ಸ್ಟೆಮ್ಸೆಲ್ ಚಿಕಿತ್ಸೆ ನೀಡುವುದು ವೃತ್ತಿಪರ ದುರ್ನಡತೆಗೆ ಕಾರಣವಾಗುತ್ತದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸಮಿತಿ ಶಿಫಾರಸು ಮಾಡಿದ ನಂತರ ಚಿಕಿತ್ಸೆ ಸ್ಥಗಿತಗೊಳಿಸಲಾಗಿತ್ತು.

Bar & Bench

ಎಎಸ್‌ಡಿ ಎಂದು ಸಂಕ್ಷಿಪ್ತವಾಗಿ ಕರೆಯಲಾಗುವ ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ನಿಂದ (ಸ್ವಲೀನತೆಯ ನ್ಯೂನತೆ) ಬಳಲುತ್ತಿದ್ದ ಇಬ್ಬರು ಮಕ್ಕಳಿಗೆ ಸೆಮ್‌ ಸೆಲ್‌ (ಕಾಂಡಕೋಶ) ಚಿಕಿತ್ಸೆ  ಮುಂದುವರೆಸಲು ಈಚೆಗೆ ಅನುಮತಿ ನೀಡಿರುವ ದೆಹಲಿ ಹೈಕೋರ್ಟ್‌, ಚಿಕಿತ್ಸೆಯನ್ನು ಹಠಾತ್‌ ಸ್ಥಗಿತಗೊಳಿಸುವುದು ರೋಗಗ್ರಸ್ತ ಮಕ್ಕಳ ಬಗೆಗಿನ ಹಿತಾಸಕ್ತಿಗೆ ಪೂರಕವಲ್ಲ ಎಂದಿದೆ.

ಎಎಸ್‌ಡಿ ರೋಗಕ್ಕೆ ಸಂಬಂಧಿಸಿದಂತೆ ಸ್ಟೆಮ್ ಸೆಲ್ ಬಳಕೆ ಕುರಿತು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನೈತಿಕತೆ- ವೈದ್ಯಕೀಯ ನೋಂದಣಿ ಮಂಡಳಿ (ಇಎಂಆರ್‌ಬಿ) ಸಮಿತಿಯು 2022ರ ಡಿಸೆಂಬರ್ 6ರಂದು ಮಾಡಿದ್ದ ಶಿಫಾರಸುಗಳನ್ನು ಪ್ರಶ್ನಿಸಿ ಮಕ್ಕಳ ಪೋಷಕರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ವಿಭಾಗೀಯ ಪೀಠ  ಈ ಆದೇಶ ನೀಡಿದೆ.

ಎಎಸ್‌ಡಿಗೆ ಸಂಬಂಧಿಸಿದಂತೆ ಸ್ಟೆಮ್‌ಸೆಲ್‌ ಬಳಕೆ, ಉತ್ತೇಜನ ಅಥವಾ ಅದನ್ನು ಪ್ರಚುರಪಡಿಸುವುದು ವೃತ್ತಿಪರ ದುರ್ನಡತೆಯಾಗುತ್ತದೆ ಎಂದು ಶಿಫಾರಸು ಹೇಳಿತ್ತು. ಶಿಫಾರಸುಗಳನ್ನು ಎನ್‌ಎಂಸಿ ಮುಂದೆ ಇರಿಸಲಾಗಿದ್ದರೂ ಅದು ಇನ್ನೂ ನಿರ್ಧಾರ ಪ್ರಕಟಿಸಿಲ್ಲ ಎಂದು ಅರ್ಜಿದಾರರು ಬೆರಳು ಮಾಡಿದ್ದರು.

ಸ್ಟೆಮ್‌ಸೆಲ್‌ ಚಿಕಿತ್ಸೆ ಪಡೆದ ನಂತರ ಮಕ್ಕಳ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯಾಗಿತ್ತು. ಆದರೆ ಶಿಫಾರಸಿನ ಕಾರಣಕ್ಕಜೆ ವೃತ್ತಿಪರ ದುರ್ನಡತೆ ಉಂಟಾಗುತ್ತದೆ ಎಂದು ಹೆದರಿ ವೈದ್ಯರು ಚಿಕಿತ್ಸೆ ನಿಲ್ಲಿಸಿದ್ದಾರೆ ಎಂಬುದಾಗಿ ಮಕ್ಕಳ ಪೋಷಕರು ಅಳಲು ತೋಡಿಕೊಂಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ಸ್ಟೆಮ್‌ಸೆಲ್‌ ಚಿಕಿತ್ಸೆಯಿಂದ ಚೇತರಿಸಿಕೊಂಡದ್ದಕ್ಕೆ ಮಕ್ಕಳ ತಾಯಿ ಮತ್ತು ಪ್ರಸಿದ್ಧ ಆಂಕೊಲಾಜಿಸ್ಟ್ ಆಗಿರುವ ಡಾ ಸಂಧ್ಯಾ ಗೋಕವರಪು ಅವರ ನಿದರ್ಶನ ಇದ್ದು ಆರಂಭದಲ್ಲೇ ಚಿಕಿತ್ಸೆ ಸ್ಥಗಿತಗೊಳಿಸುವುದು ಹಾನಿಕಾರಕ ಹಿನ್ನಡೆ ಉಂಟುಮಾಡಬಲ್ಲದು ಎಂದಿದೆ.