ANI v. Wikipedia 
ಸುದ್ದಿಗಳು

ಎಎನ್ಐ ಪುಟದಲ್ಲಿರುವ ಮಾನಹಾನಿಕರ ವಿವರ ತೆಗೆದುಹಾಕುವಂತೆ ವಿಕಿಪೀಡಿಯಕ್ಕೆ ದೆಹಲಿ ಹೈಕೋರ್ಟ್ ಆದೇಶ

ಜುಲೈ 2024ರಲ್ಲಿ ವಿಕಿಪೀಡಿಯಾಕ್ಕೆ ಸಮನ್ಸ್ ಜಾರಿ ಮಾಡಿದ್ದ ಹೈಕೋರ್ಟ್ ವಿಕಿಪೀಡಿಯದಲ್ಲಿರುವ ಮಾಹಿತಿ ಸಂಕಲಿಸಿದ್ದ ಮೂವರ ವಿವರ ನೀಡುವಂತೆ ಆದೇಶಿಸಿತ್ತು.

Bar & Bench

ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್‌ (ಎಎನ್‌ಐ) ಸುದ್ದಿ ಸಂಸ್ಥೆ ಕುರಿತು ವಿಕಿಪೀಡಿಯಾ ಪುಟದಲ್ಲಿ ಪ್ರಕಟಿಸಿರುವ ಮಾನನಷ್ಟ ಹೇಳಿಕೆಗಳನ್ನು ತೆಗೆದುಹಾಕುವಂತೆ ವಿಕಿಪೀಡಿಯಾ ನಡೆಸುತ್ತಿರುವ ವಿಕಿಮೀಡಿಯಾ ಪ್ರತಿಷ್ಠಾನಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿದೆ.

ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಸಂಕಲಿಸಲು ಅವಕಾಶವಿದ್ದು ಎಎನ್‌ಐ ಸಂಸ್ಥೆಯನ್ನು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಸಾಧನ ಎಂದು ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಬರೆದದ್ದು ವ್ಯಾಜ್ಯದ ಮೂಲವಾಗಿದೆ. ಹಾಗೆ ಬರೆದವರ ವಿವರವನ್ನು ವಿಕಿಪೀಡಿಯ ಬಹಿರಂಗಪಡಿಸಿಲ್ಲ ಎಂದು ಆಕ್ಷೇಪಿಸಿ ಎಎನ್‌ಐ ದಾಖಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠ ನಡೆಸಿತು.

ಆದೇಶ ಪ್ರಕಟಿಸಿದ ನ್ಯಾಯಾಲಯ ಕೆಲ ಮನವಿಗಳನ್ನು ಪುರಸ್ಕರಿಸಲಾಗಿದೆ. ಇಂದು ಸಂಜೆಯೊಳಗೆ ಆದೇಶದ ಪ್ರತಿಯನ್ನು ನ್ಯಾಯಾಲಯದ ಜಾಲತಾಣದಲ್ಲಿ ಪ್ರಕಟ ಮಾಡಲಾಗುವುದು ಎಂದು ಹೇಳಿದೆ.

ಹಿರಿಯ ವಕೀಲ  ಜಯಂತ್ ಮೆಹ್ತಾ ವಿಕಿಪೀಡಿಯಾ ಪರ ವಾದ ಮಂಡಿಸಿದ್ದರು. ಎಎನ್ಐ ಸುದ್ದಿಸಂಸ್ಥೆಯನ್ನು ವಕೀಲ ಸಿದ್ದಾಂತ್ ಕುಮಾರ್ ಪ್ರತಿನಿಧಿಸಿದ್ದರು.

ಪ್ರಕರಣ ವಿಭಾಗೀಯ ಪೀಠದೆದುರು ಬಂದಾಗ ಎಎನ್‌ಐ ವಿರುದ್ಧ ವಿಕಿಪೀಡಿಯಾ ಪ್ರತಿಷ್ಠಾನ ಎಂಬ ಪುಟ ಸಂಕಲಿಸಿರುವುದನ್ನು ಗಮನಿಸಿದ  ಅಂದಿನ ಮುಖ್ಯ ನ್ಯಾಯಮೂರ್ತಿ ಮನಮೋಹನ್ (ಸುಪ್ರೀಂ ಕೋರ್ಟ್‌ ಹಾಲಿ ನ್ಯಾಯಮೂರ್ತಿಗಳು) ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಇದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ವಿಕಿಪೀಡಿಯಾ ಅದನ್ನು ತೆಗೆದುಹಾಕುವಂತೆ ಆದೇಶಿಸಿತ್ತು.

ಪುಟ ತೆಗೆದು ಹಾಕಿದ ವಿಕಿಪೀಡಿಯ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಈ ಸಂಬಂಧ ಮಾರ್ಚ್ 17 ರಂದು ಎಎನ್‌ಐಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್‌ ಏಪ್ರಿಲ್ 4 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.