Delhi High Court, Twitter 
ಸುದ್ದಿಗಳು

ಹಿಂದೂ ದೇವತೆ ಕಾಳಿಯ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದುಹಾಕುವಂತೆ ಟ್ವಿಟರ್‌ಗೆ ದೆಹಲಿ ಹೈಕೋರ್ಟ್ ತಾಕೀತು

‘ಎಥಿಸ್ಟ್ ರಿಪಬ್ಲಿಕ್’ ಎಂಬ ಟ್ವಿಟರ್ ಹ್ಯಾಂಡಲ್ ಕಾಳಿದೇವಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿದ್ದು ಇದು ಸಮುದಾಯಗಳ ನಡುವೆ ದ್ವೇಷ ಉಂಟುಮಾಡುತ್ತದೆ ಎಂದು ಅರ್ಜಿದಾರರು ದೂರಿದ್ದರು.

Bar & Bench

ಹಿಂದೂ ದೇವತೆ ಕಾಳಿಯ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆದುಹಾಕಲು ವಿಫಲವಾದ ಟ್ವಿಟರ್‌ ಸಂಸ್ಥೆಯನ್ನು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದೆ. (ಆದಿತ್ಯ ಸಿಂಗ್ ದೇಶ್ವಾಲ್ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ).

ಚಿತ್ರಗಳನ್ನು ತೆಗೆದುಹಾಕಿ ಸಾಮಾನ್ಯ ಜನರ ಭಾವನೆಗಳನ್ನು ಗೌರವಿಸುವಂತೆ ನ್ಯಾಯಾಲಯ ಟ್ವಿಟರ್‌ಗೆ ತಾಕೀತು ಮಾಡಿದೆ.

ಆದಿತ್ಯ ಸಿಂಗ್ ದೇಶ್ವಾಲ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಪೊದ್ದಾರ್, ‘ಎಥಿಸ್ಟ್‌ ರಿಪಬ್ಲಿಕ್‌’ ಹೆಸರಿನ ಹ್ಯಾಂಡಲ್‌ನಿಂದ ಚಿತ್ರಗಳನ್ನು ಪೋಸ್ಟ್ ಮಾಡಲಾಗಿದ್ದು ದೇವಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿರುವುದು ಸಮಸ್ಯೆ ಸೃಷ್ಟಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

"ಟ್ವಿಟ್ಟರ್ ಬಳಕೆದಾರ @Atheistrepublic ಟ್ವೀಟ್‌ ಮಾಡಿರುವ ವಿಷಯ 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಟ್ವಿಟರ್‌ನ ಕುಂದುಕೊರತೆ ವಿಭಾಗದ ಅಧಿಕಾರಿಗೆ ತಿಳಿಸಲಾಗಿತ್ತು. ನಿಯಮ ಪಾಲಿಸದಿರುವುದು ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ- 2000ರ ಸೆಕ್ಷನ್ 79ರ ಅಡಿಯಲ್ಲಿ ಟ್ವಿಟರ್‌ಗೆ ಒದಗಿಸಲಾದ ಕಾನೂನು ವಿನಾಯಿತಿಯನ್ನು ಕಸಿದುಕೊಳ್ಳುತ್ತದೆ. @AtheistRepublic ಎಂಬ ಟ್ವಿಟ್ಟರ್ ಬಳಕೆದಾರರಿಂದ ಪೋಸ್ಟ್ ಮಾಡಲಾದ ವಿಷಯ ನಿಂದನೀಯವಾಗಿದ್ದು ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸುತ್ತದೆ ಮತ್ತು ಸಮಾಜದಲ್ಲಿ ದ್ವೇಷ ಹಾಗೂ ದುರಾಚಾರವನ್ನು ಬಿತ್ತುತ್ತದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಟ್ವಿಟ್ಟರ್ ಪರ ಹಾಜರಾದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ಲೂತ್ರಾ, “ಹೈಕೋರ್ಟ್ ನಿರ್ದೇಶನಗಳನ್ನು ಟ್ವಿಟರ್‌ ಪಾಲಿಸುತ್ತದೆ ಮತ್ತು ಅದನ್ನು ಆದೇಶದಲ್ಲಿ ಕೂಡ ಉಲ್ಲೇಖಿಸಬಹುದು” ಎಂದು ಮನವಿ ಮಾಡಿದರು. ಅರ್ಜಿದಾರರ ಪರವಾಗಿ ವಕೀಲರಾದ ಅಶೋಕ್ ಕಶ್ಯಪ್ ಮತ್ತು ದೀಪಾ ಮಲಿಕ್ ಕೂಡ ವಾದ ಮಂಡಿಸಿದ್ದರು.