ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜಯ್ ಅನ್ಮೋಲ್ ಅಂಬಾನಿ ಅವರ ಮಾಲೀಕತ್ವದ ಕಂಪನಿಯ ಖಾತೆಯನ್ನು ವಂಚನೆಯ ಖಾತೆ ಎಂದು ವರ್ಗೀಕರಿಸುವ ಮುನ್ನ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತೆ ಎಂದು ವಿವರಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನಿರ್ದೇಶನ ನೀಡಿದೆ [ಅನ್ಮೋಲ್ ಅಂಬಾನಿ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇನ್ನಿತರರ ನಡುವಣ ಪ್ರಕರಣ].
ಪ್ರಕರಣದ ಕುರಿತು ಅಫಿಡವಿಟ್ ಸಲ್ಲಿಸುವಂತೆ ಬ್ಯಾಂಕಿನ ವಕೀಲರಿಗೆ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಆದೇಶಿಸಿದರು. "ನಾನು ಅವರಿಗೆ ಕ್ಲೀನ್ ಚಿಟ್ ನೀಡಿ ಎಂದು ಹೇಳುತ್ತಿಲ್ಲ, ಆದರೆ ಅವರಿಗೆ ಶೋಕಾಸ್ ನೋಟಿಸ್ ನೀಡಬೇಕಿತ್ತು" ಎಂದು ನ್ಯಾಯಾಲಯ ಹೇಳಿದೆ. ಡಿಸೆಂಬರ್ 19 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಖಾತೆಯನ್ನು ವಂಚನೆಯ ಖಾತೆ ಎಂದು ಘೋಷಿಸುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ಧಾರ ಪ್ರಶ್ನಿಸಿ ಜಯ್ ಅನ್ಮೋಲ್ ಅಂಬಾನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್ ಶೋಕಾಸ್ ನೋಟಿಸ್ ನೀಡದೆ ಅಥವಾ ತನ್ನ ವಾದ ಆಲಿಸದೆಯೇ, ಸ್ವಾಭಾವಿಕ ನ್ಯಾಯ ತತ್ವ ಉಲ್ಲಂಘಿಸಿ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ವಾದಿಸಿದ್ದರು.
ಅದು ಹೀಗೆ ಮಾಡಿರುವುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ರಾಜೇಶ್ ಅಗರ್‌ವಾಲ್ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿದೆ. ಖಾತೆಯನ್ನು ವಂಚನೆ ಎಂದು ಘೋಷಿಸುವ ಮೊದಲು ಸಾಲಗಾರರಿಗೆ ನೋಟಿಸ್ ನೀಡಿ ಅವರು ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ ಎಂದು ವಾದಿಸಲಾಗಿತ್ತು.
ಗಮನಾರ್ಹ ಅಂಶವೆಂದರೆ, ಸುಮಾರು ₹14,853 ಕೋಟಿ ಮೊತ್ತದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಸಮೂಹ ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇದೇ ವೇಳೆ ಜಯ್ ಅನ್ಮೋಲ್ ಅವರು ಸಾರ್ವಜನಿಕ ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚನೆ ಎಸಗಿ ₹228 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ದೂರಿತ್ತು.
ವರದಿಗಳ ಪ್ರಕಾರ, ಜಯ್ ಅನ್ಮೋಲ್ ಅಂಬಾನಿ ನಿರ್ದೇಶಕರಾಗಿದ್ದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್) ಭಾರಿ ಮೊತ್ತದ ಸಾಲ ಪಡೆದಿದ್ದರೂ ಅದನ್ನು ಮರುಪಾವತಿಸಿರಲಿಲ್ಲ. ವಿಶೇಷ ಲೆಕ್ಕ ಪರಿಶೋಧನೆ ವೇಳೆ ಹಣ ದುರುಪಯೋಗವಾಗಿರುವುದು ಕಂಡುಬಂದಿತ್ತು. ಪರಿಣಾಮ ಅವರ ಖಾತೆ ಅನುತ್ಪಾದಕ ಆಸ್ತಿ ಎಂದು ಘೋಷಿತವಾಯಿತು ಎಂದು ಸಿಬಿಐ ವಿವರಿಸಿತ್ತು.
ತನಗೆ ₹228 ಕೋಟಿ ರೂಪಾಯಿ ಎಂದು ಆರೋಪಿಸಿದ್ದ ಯೂನಿಯನ್ ಬ್ಯಾಂಕ್ ಅನಿಲ್ ಅವರ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಿತ್ತು. ನಂತರ, ಸಿಬಿಐ ಅನ್ಮೋಲ್ ಅಂಬಾನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ಹಿರಿಯ ವಕೀಲ ರಾಜೀವ್ ನಾಯರ್ ಅವರು ಜಯ್ ಅನ್ಮೋಲ್ ಅಂಬಾನಿ ಪರ ವಾದಿಸಿದರು.