ರಾಷ್ಟ್ರೀಯ ಕಾನೂನನ್ನು ವೈಯಕ್ತಿಕ ಇಲ್ಲವೇ ಸಾಂಪ್ರದಾಯಿಕ ಕಾನೂನುಗಳು ಅತಿಕ್ರಮಿಸಲು ಅನುಮತಿ ನೀಡದಂತಹ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಬೇಕಿದೆ ದೆಹಲಿ ಹೈಕೋರ್ಟ್ ಹೇಳಿದೆ [ಹಮೀದ್ ರಜಾ vಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಇಸ್ಲಾಮಿಕ್ ಕಾನೂನಿನಡಿಯಲ್ಲಿ, ಪ್ರೌಢಾವಸ್ಥೆಗೆ ಬರುವ ಅಪ್ರಾಪ್ತ ಹುಡುಗಿ ಕಾನೂನುಬದ್ಧವಾಗಿ ಮದುವೆಯಾಗಬಹುದಾದರೂ ಭಾರತೀಯ ಅಪರಾಧಿಕ ಕಾನೂನಿನಡಿ ಆ ರೀತಿಯ ವಿವಾಹ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ನ್ಯಾ. ಅರುಣ್ ಮೋಂಗಾ ತಿಳಿಸಿದರು.
ಸುದೀರ್ಘ ಕಾಲದಿಂದ ಜಾರಿಯಲ್ಲಿರುವ ವೈಯಕ್ತಿಕ ಕಾನೂನುಗಳನ್ನು ಪಾಲಿಸುವುದಕ್ಕಾಗಿ ಸಮಾಜವನ್ನು ಅಪರಾಧೀಕರಿಸಬೇಕೇ ಎಂಬ ಸಂದಿಗ್ಧತೆಯನ್ನು ಈ ಪರಿಸ್ಥಿತಿ ಸೃಷ್ಟಿಸಿದೆ ಎಂದು ನ್ಯಾಯಾಧೀಶರು ತಿಳಿಸಿದರು.
"ರಾಷ್ಟ್ರೀಯ ಕಾನೂನನ್ನು ವೈಯಕ್ತಿಕ ಅಥವಾ ಸಾಂಪ್ರದಾಯಿಕ ಕಾನೂನು ಅತಿಕ್ರಮಿಸದಂತೆ ಏಕರೂಪ ಚೌಕಟ್ಟನ್ನು ಒದಗಿಸುವ ಏಕರೂಪ ನಾಗರಿಕ ಸಂಹಿತೆಯತ್ತ ಸಾಗಲು ಇದು ಸಕಾಲ ಅಲ್ಲವೇ?" ಎಂದು ನ್ಯಾಯಾಲಯ ಕೇಳಿದೆ.
ಈ ವೈರುಧ್ಯದಿಂದಾಗಿ ಶಾಸಕಾಂಗ ಸ್ಪಷ್ಟತೆ ಅಗತ್ಯ ಎನಿಸಿದ್ದು ಇಡೀ ಸಮುದಾಯಗಳನ್ನು ಅಪರಾಧೀಕರಿಸುವುದನ್ನು ಮುಂದುವರಿಸಬೇಕೆ ಅಥವಾ ಕಾನೂನು ಖಚಿತತೆಯ ಮೂಲಕ ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಬೇಕೆ ಎಂದು ಶಾಸಕಾಂಗ ನಿರ್ಧರಿಸಬೇಕು ಎಂದು ನ್ಯಾ. ಮೋಂಗಾ ಹೇಳಿದರು.
ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ದೊರೆತಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಏಕರೂಪ ಕಾನೂನುಗಳು ಕುಂದಿಸಬಹುದು ಎಂದು ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸುವವರು ಎಚ್ಚರಿಸುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಅಂತಹ ಸ್ವಾತಂತ್ರ್ಯ ವ್ಯಕ್ತಿಗಳನ್ನು ಕ್ರಿಮಿನಲ್ ಹೊಣೆಗಾರಿಕೆಗೆ ಒಳಪಡಿಸುವ ಆಚರಣೆಗಳವರೆಗೆ ಕರೆದೊಯ್ಯಬಾರದು ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.
ಬಾಲ್ಯ ವಿವಾಹ ನಿಷೇಧ, ಮಕ್ಕಳ ರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಎಲ್ಲರಿಗೂ ಒಂದೇ ನಿಯಮ ಇರಬೇಕು. ಏಕೆಂದರೆ ಅವು ಬಿಎನ್‌ಎಸ್ ಮತ್ತು ಪೋಕ್ಸೊ ಎರಡಕ್ಕೂ ನೇರವಾಗಿ ವಿರೋಧಾಭಾಸದಿಂದ ಕೂಡಿವೆ. ಆದರೆ ಕಡಿಮೆ ವಿವಾದ ಇರುವ ವೈಯಕ್ತಿಕ ಕಾನೂನು ವಿಚಾರಗಳನ್ನು ಸಮುದಾಯದೊಳಗೆ ಹಂತಹಂತವಾಗಿ ಬದಲಿಸಬಹುದು ಎಂದು ನ್ಯಾಯಾಲಯ ನುಡಿಯಿತು.
ಮಲತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಪರಿಣಾಮ ಮಗುವನ್ನು ಹೆತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಹಮೀದ್ ರಾಜಾ ಎಂಬಾತ ಮದುವೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯಿದೆಯಡಿಯಲ್ಲಿ ಹುಡುಗಿಯ ಮಲತಂದೆ ಪ್ರಕರಣ ದಾಖಲಿಸಿದ್ದರು.
ಸಂತ್ರಸ್ತೆಯ ಜನ್ಮದಾಖಲೆ ಮತ್ತು ಎಫ್‌ಐಆರ್‌ನಲ್ಲಿ ತಾನು ಅಪ್ರಾಪ್ತೆ ಎಂದು ದಾಖಲಾಗಿದ್ದರೂ ತನಗೆ 20 ವರ್ಷ ವಯಸ್ಸಾಗಿದ್ದು ಇಸ್ಲಾಮಿಕ್ ಕಾನೂನಿನಡಿಯಲ್ಲಿ ಮಾನ್ಯ ವಿವಾಹ ಪ್ರಮಾಣಪತ್ರದೊಂದಿಗೆ ಸ್ವಯಂಪ್ರೇರಣೆಯಿಂದ ರಾಜಾ ಅವರನ್ನು ವಿವಾಹವಾಗಿರುವುದಾಗಿ ಸಂತ್ರಸ್ತೆ ಹೇಳಿಕೊಂಡಿದ್ದರು. ಇಬ್ಬರ ದಾಂಪತ್ಯದಿಂದ ಒಂದು ಮಗು ಕೂಡ ಜನಿಸಿದೆ ಎಂದು ಅವರು ಹೇಳಿದ್ದರು.
ಆದರೆ ರಾಜಾ ಅವರು ಅಪ್ರಾಪ್ತೆಯನ್ನು ವಿವಾಹವಾಗಿರುವುದರಿಂದ ಈ ಸಂಬಂಧ ಮತ್ತು ವಿವಾಹ ಅಪರಾಧ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಐಪಿಸಿ/ಬಿಎನ್ಎಸ್ ಮತ್ತು ಪೋಕ್ಸೊ ಕಾಯಿದೆ ಪ್ರಕಾರ ಇದು ಅಪರಾಧವಾದರೂ ಇಸ್ಲಾಮಿಕ್ ವೈಯಕ್ತಿಕ ಕಾನೂನಿನ ಪ್ರಕಾರ ಬಾಲಕಿ ಪ್ರೌಢಾವಸ್ಥೆ ತಲುಪುತ್ತಿದ್ದಂತೆ ವಿವಾಹವಾಗಲು ಅವಕಾಶ ಇದೆ ಎನ್ನುವುದನ್ನು ಗಮನಿಸಿದ ನ್ಯಾಯಾಲಯ ಇಸ್ಲಾಮಿಕ್ ಕಾನೂನು ಮತ್ತು ದೇಶದ ಅಪರಾಧಿಕ ಕಾನೂನುಗಳ ನಡುವಿನ ವಿರೋಧಾಭಾಸದ ಬಗ್ಗೆ ಪ್ರಸ್ತಾಪಿಸಿತು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ದುಷ್ಕೃತ್ಯಗಳನ್ನು ಮರೆಮಾಚಲು ಯುವತಿಯ ಮಲತಂದೆ ಪ್ರಕರಣ ದಾಖಲಿಸಿದ್ದಾರೆ ಎಂದ ನ್ಯಾಯಾಲಯ ಬಂಧನದ ವೇಳೆ ಕಾನೂನು ಪ್ರಕ್ರಿಯೆ ಪಾಲಿಸದಿರುವುದನ್ನು ಗಮನಿಸಿತು. ಅಂತೆಯೇ ಸೆಪ್ಟೆಂಬರ್ 19, 2025 ರಿಂದ ಮಧ್ಯಂತರ ಜಾಮೀನಿನಲ್ಲಿದ್ದ ರಾಝಾ ಅವರಿಗೆ ನ್ಯಾಯಾಲಯ ನಿಯಮಿತ ಜಾಮೀನು ನೀಡಿತು.
ಪ್ರೊಫೆಸರ್ ಫೈಜಾನ್ ಮುಸ್ತಫಾ (ಉಪಕುಲಪತಿಗಳು, ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ), ಡಾ. ಮೊಹಮ್ಮದ್ ಖಾಲಿದ್ ಖಾನ್ (ಇಸ್ಲಾಮಿಕ್ ಅಧ್ಯಯನ ವಿಭಾಗ, ಜಾಮಿಯಾ ಮಿಲಿಯಾ ಇಸ್ಲಾಮಿಯಾ) ಮತ್ತು ನೆಹಾಲ್ ಅಹ್ಮದ್ (ಕಾನೂನಿನ ಸಹಾಯಕ ಪ್ರಾಧ್ಯಾಪಕರು, ವೋಕ್ಸೆನ್ ವಿಶ್ವವಿದ್ಯಾಲಯ, ಹೈದರಾಬಾದ್) ಅವರು ಇಸ್ಲಾಮಿಕ್ ಕಾನೂನಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಹಾಯ ಮಾಡಿದರು.