
ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ಮೂಲ ತತ್ವಗಳನ್ನು ಸಾಕಾರಗೊಳಿಸಲು ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಕಾಯಿದೆ ರೂಪ ನೀಡಲು ಸಂಸತ್ ಮತ್ತು ರಾಜ್ಯ ವಿಧಾನಸಭೆಗಳು ಎಲ್ಲಾ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಕುಟುಂಬದ ಆಸ್ತಿ ವಿಭಾಗ ದಾವೆಯೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವೇಕ ನಗರದ ಸಮೀವುಲ್ಲಾ ಖಾನ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರ ಏಕಸದಸ್ಯ ಪೀಠವು ತೀರ್ಪಿನಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಿದೆ.
ಯುಸಿಸಿಯು ಮಹಿಳೆಯರಿಗೆ ನ್ಯಾಯದ ಖಾತರಿ ನೀಡುತ್ತದೆ. ಧರ್ಮ ಮತ್ತು ಜಾತಿಗಳ ನಡುವೆ ಅದು ಸಮಾನತೆ ಸೃಷ್ಟಿಸಲಿದ್ದು, ಭ್ರಾತೃತ್ವದ ಮೂಲಕ ವ್ಯಕ್ತಿಗತ ಘನತೆಯನ್ನು ಎತ್ತಿಹಿಡಿಯಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಎಲ್ಲಾ ಮಹಿಳೆಯರು ಸಂವಿಧಾನದ ಅಡಿ ಸಮಾನ ನಾಗರಿಕರಾಗಿದ್ದಾರೆ. ಧರ್ಮದ ಆಧಾರದಲ್ಲಿ ವೈಯಕ್ತಿಕ ಕಾನೂನುಗಳು ವ್ಯತ್ಯಯವಾಗಲಿದ್ದು, ಇದರಿಂದ ಮಹಿಳೆಯರಲ್ಲಿ ಭೇದ ಸೃಷ್ಟಿಸಲಿದೆ. ದೇಶದ ಎಲ್ಲಾ ಮಹಿಳೆಯರಿಗೆ ಭಾರತದ ನಾಗರಿಕತ್ವ ಇದ್ದರೂ ತಾರತಮ್ಯ ಸೃಷ್ಟಿಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
“ಯುಸಿಸಿ ಕಾನೂನು ಜಾರಿ ಮಾಡಬೇಕು ಎಂಬ ಅಭಿಪ್ರಾಯವನ್ನು ನ್ಯಾಯಾಲಯ ಹೊಂದಿದ್ದು, ಅದನ್ನು ಜಾರಿಗೊಳಿಸುವುದರಿಂದ ಮಹಿಳೆಯರಿಗೆ ನ್ಯಾಯ ಸಿಗಲಿದೆ. ಇದು ಸಮಾನತೆ ಸೃಷ್ಟಿಸಲಿದ್ದು, ಎಲ್ಲರಿಗೂ ಅವಕಾಶ ಸೃಜಿಸಲಿದೆ. ಇದರಿಂದ ಧರ್ಮ ಮತ್ತು ಜಾತಿ ಮೀರಿ ಎಲ್ಲಾ ಮಹಿಳೆಯರ ಸಮಾನತೆಯ ಕನಸಿಗೆ ವೇಗ ಹೆಚ್ಚಿಸಲಿದೆ. ಇದರ ಜೊತೆಗೆ ಭ್ರಾತೃತ್ವದ ಮೂಲಕ ವ್ಯಕ್ತಿಗತವಾಗಿ ಘನತೆಯನ್ನು ಖಾತರಿಗೊಳಿಸುತ್ತದೆ. ಆದ್ದರಿಂದ, ಯುಸಿಸಿ ಜಾರಿಯು ಸಂವಿಧಾನದ ಪೀಠಿಕೆಯಲ್ಲಿನ ಮೂಲತತ್ವಗಳಲ್ಲಿನ ಉದ್ದೇಶನವನ್ನು ನೈಜರೂಪದಲ್ಲಿ ಸಾಕಾರಗೊಳಿಸಿದಂತಾಗುತ್ತದೆ. ಈ ದಿಸೆಯಲ್ಲಿ ಯುಸಿಸಿ ಜಾರಿಗೊಳಿಸಲು ಎಲ್ಲಾ ಪ್ರಯತ್ನ ಮಾಡುವಂತೆ ಸಂಸತ್ ಮತ್ತು ವಿಧಾನಸಭೆಗಳಿಗೆ ಮನವಿ ಮಾಡುವ ಇಚ್ಛೆಯನ್ನು ನ್ಯಾಯಾಲಯ ಹೊಂದಿದೆ” ಎಂದು ಹೇಳಲಾಗಿದೆ.
ಹಿಂದೂ ಕಾನೂನಿನ ಪ್ರಕಾರ ಗಂಡು ಮಗನಿಗೆ ಇರುವ ರೀತಿಯಲ್ಲಿಯೇ ಮಗಳಿಗೂ ಜನ್ಮದತ್ತ ಹಕ್ಕು ಮತ್ತು ಬಾದ್ಯತೆಗಳಿವೆ ಮತ್ತು ಪತಿ-ಪತ್ನಿಯರಿಬ್ಬರೂ ಸಮಾನರಾಗಿದ್ದಾರೆ. ಈ ಸಮಾನತೆಯ ಅಂಶ ಮಹಮದೀಯನ್ ಕಾನೂನಿನಲ್ಲಿ ಕಾಣುವುದಿಲ್ಲ. ವೈಯಕ್ತಿಕ ಕಾನೂನು ಮೀರಿ ಸಾಂವಿಧಾನಿಕ ಉದ್ದೇಶವಾದ ಕಾನೂನಿನ ಅಡಿ ಎಲ್ಲರೂ ಸಮಾನರು ಎಂಬ ಅಂಶವನ್ನು ಎತ್ತಿ ಹಿಡಿಯಲು ಯುಸಿಸಿ ಅಗತ್ಯವಿದೆ ಎಂದು ಒತ್ತಿ ಹೇಳಿದೆ.
“ವೈಯಕ್ತಿಕ ಕಾನೂನು ಮತ್ತು ಧರ್ಮವನ್ನು ಮೀರಿ ದೇಶಕ್ಕೆ ಯುಸಿಸಿ ಅಗತ್ಯವಾಗಿದ್ದು, ಆಗ ಮಾತ್ರ ಸಂವಿಧಾನದ 14ನೇ ವಿಧಿಯ ಉದ್ದೇಶ ಈಡೇರಿದಂತಾಗುತ್ತದೆ. ಹಿಂದೂ ಕಾನೂನಿನಲ್ಲಿ ಸಂವಿಧಾನದ 14ನೇ ವಿಧಿ ಈಡೇರಲಿದ್ದು, ಮಹಮದೀಯನ್ ಕಾನೂನಿನಲ್ಲಿ ಅದು ಸಾಧ್ಯವಾಗುತ್ತಿಲ್ಲ” ಎಂದಿದೆ.
ಪ್ರಕರಣದ ಹಿನ್ನೆಲೆ: ಅಬ್ದುಲ್ ಬಷೀರ್ ಖಾನ್ ಎಂಬವರು ಹಲವು ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಗಳನ್ನು ಬಿಟ್ಟು ನಿಧನರಾಗಿದ್ದ ಹಿನ್ನೆಲೆಯಲ್ಲಿ ಉದ್ಭವಿಸಿದ ಆಸ್ತಿ ವಿವಾದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನ ಅಂಶಗಳನ್ನು ಉಲ್ಲೇಖಿಸಿದೆ.
ಬಷೀರ್ ನಿಧನ ಬಳಿಕ ಪುತ್ರಿ ಶಹನಾಜ್ ಬೇಗಂ ಪತಿಯು ಆಕೆ ಸಾವನ್ನಪ್ಪಿದ ನಂತರ ಆಸ್ತಿ ಹಂಚಿಕೆ ಸಂದರ್ಭದಲ್ಲಿ ಆಕೆಯನ್ನು ಕಾನೂನಿಗೆ ವಿರುದ್ಧವಾಗಿ ಕೈಬಿಡಲಾಗಿದ್ದು, ಆಸ್ತಿಯಲ್ಲಿ ನ್ಯಾಯಬದ್ಧ ಹಕ್ಕು ನೀಡಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019ರಲ್ಲಿ ಬೆಂಗಳೂರಿನ ಸತ್ರ ನ್ಯಾಯಾಲಯವು ಒಟ್ಟು ಆಸ್ತಿಗಳ ಪೈಕಿ ಜಂಟಿ ಆಸ್ತಿಯಾಗಿರುವ ಆಕ್ಷೇಪಿತ ಮೂರು ಆಸ್ತಿಗಳಲ್ಲಿ ಬೇಗಂ ಅವರ ಕಾನೂನುಬದ್ಧ ಪ್ರತಿನಿಧಿಗಳು 1/5ನೇ ಭಾಗಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿತ್ತು. ಆದರೆ, ಇದನ್ನು ಬೇರೆ ಆಸ್ತಿಗಳಿಗೆ ಅನ್ವಯಿಸಿರಲಿಲ್ಲ. ಈ ತೀರ್ಪಿನಿಂದ ಅಸಂತುಷ್ಟರಾಗದ ಬಶೀರ್ ಅಹ್ಮದ್ ಅವರ ಇಬ್ಬರು ಪುತ್ರರಾದ ಸಮೀಉಲ್ಲಾ ಖಾನ್, ನೂರುಲ್ಲಾ ಖಾನ್ ಮತ್ತು ಪುತ್ರಿ ರಹತ್ ಜಾನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದೇ ಸಂದರ್ಭಕ್ಕೆ ಸಿರಾಜುದ್ದೀನ್ ಅವರು ವಿಚಾರಣೆ ನ್ಯಾಯಾಲಯದ ಆದೇಶ ಪ್ರಶ್ನಿಸಿ, ತಮ್ಮ ಆಸ್ತಿ ಪಾಲು ಹೆಚ್ಚಿಸಲು ಮತ್ತು ಹಿಂದಿನ ಆದೇಶದಲ್ಲಿ ಮಾರ್ಪಾಡು ಕೋರಿ ಪಾಟಿ-ಆಕ್ಷೇಪಣೆ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣಾಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ. ಇದೇ ವೇಳೆ ಸಿರಾಜುದ್ದೀನ್ ಸಲ್ಲಿಸಿದ್ದ ಪಾಟಿ-ಆಕ್ಷೇಪಣೆಯನ್ನು ವಜಾಗೊಳಿಸಿದೆ.
ಮೇಲ್ಮನವಿದಾರರ ಪರವಾಗಿ ವಕೀಲ ಇರ್ಷಾದ್ ಅಹ್ಮದ್, ಪ್ರತಿವಾದಿಗಳ ಪರವಾಗಿ ವಕೀಲ ಮೊಹಮ್ಮದ್ ಸಯೀದ್ ವಾದಿಸಿದ್ದರು.