Bharatiya Nyaya Sanhita, 2023 
ಸುದ್ದಿಗಳು

ಅಸ್ವಾಭಾವಿಕ ಲೈಂಗಿಕ ಕೃತ್ಯಗಳ ಶಿಕ್ಷೆಯ ವಿಚಾರವಾಗಿ ಶೀಘ್ರ ನಿರ್ಧರಿಸಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ನಿರ್ದೇಶನ

ಹೊಸ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲದಿರುವಾಗ, ಒಪ್ಪಿಗೆಯಿಲ್ಲದ ಅಸ್ವಾಭಾವಿಕ ಲೈಂಗಿಕ ಅಪರಾಧ ಇನ್ನೂ ಅಪರಾಧವಾಗಿರುತ್ತದೆಯೇ ಎಂದು ನ್ಯಾಯಾಲಯ ಕೇಂದ್ರವನ್ನು ಪ್ರಶ್ನಿಸಿದೆ.

Bar & Bench

ಅಸ್ವಾಭಾವಿಕ ಲೈಂಗಿಕ ಕೃತ್ಯಗಳಿಗೆ (ಸೊಡೊಮಿ) ಶಿಕ್ಷೆ ವಿಧಿಸುವ ನಿಬಂಧನೆಯನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್ಎಸ್‌) ಅಡಕಗೊಳಿಸಲು ಕೋರಲಾಗಿರುವ ಬೇಡಿಕೆಗೆ ಸಂಬಧಿಸಿದಂತೆ ಶೀಘ್ರ ನಿರ್ಧಾರ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಈ ಹಿಂದಿನ ಭಾರತೀಯ ಅಪರಾಧ ಸಂಹಿತೆಯಲ್ಲಿ (ಐಪಿಸಿ) ಇದ್ದ ಸೆಕ್ಷನ್‌ 377ಕ್ಕೆ ತತ್ಸಮಾನವಾದ ನಿಬಂಧನೆಯ ಅನುಪಸ್ಥಿತಿ ನೂತನ ಅಪರಾಧಿಕ ಕಾನೂನಿನಲ್ಲಿರುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ಈ ನಿರ್ದೇಶನ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (ಸಿಜಿಎಸ್‌ಸಿ) ಅನುರಾಗ್ ಅಹ್ಲುವಾಲಿಯಾ ಅವರಿಗೆ ಆಗಸ್ಟ್ 27 ರವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಕಾಲಾವಕಾಶ ನೀಡಿದೆ.

ಹೊಸ ಕ್ರಿಮಿನಲ್‌ ಸಂಹಿತೆಯಲ್ಲಿ ಅಂತಹ ಕೃತ್ಯಗಳನ್ನು ಅಪರಾಧವಾಗಿಸಿಲ್ಲ ಎಂದು ನ್ಯಾಯಾಲಯ ನುಡಿಯಿತು.

"ನೂತನ ಕಾಯಿದೆಗಳಲ್ಲಿ (ಅಸ್ವಾಭಾವಿಕ ಲೈಂಗಿಕ ಕೃತ್ಯ ಶಿಕ್ಷಿಸಲು) ಯಾವುದೇ ನಿಬಂಧನೆಗಳಿಲ್ಲ. ಅಲ್ಲಿ ಏನಾದರೂ ಇರಬೇಕಿತ್ತು. ಅಲ್ಲಿ ಇಲ್ಲ ಎಂದಾದ ಮೇಲೆ ಅದು ಅಪರಾಧವಾಗುತ್ತದೆಯೇ? ಇದು ನಮ್ಮ ಮುಂದಿರುವ ಪ್ರಶ್ನೆ. ಅಪರಾಧ ಅಲ್ಲವೆಂದಾದರೆ, ಅದನ್ನು (ಸೆಕ್ಷನ್‌ 377) ತೆಗೆದು ಹಾಕಲಾಗಿದ್ದರೆ, ಅದು ಅಪರಾಧವಾಗದು... ಸಮ್ಮತಿ ಇಲ್ಲದ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ನಾವು ಸಜೆಯನ್ನು ನಿರ್ಧರಿಸಲಾಗದು, ಅದು ಶಾಸಕಾಂಗಕ್ಕೆ ಬಿಟ್ಟ ವಿಚಾರ," ಎಂದು ನ್ಯಾಯಾಲಯ ಹೇಳಿತು.

ಈ ಹಿಂದಿನ ಭಾರತೀಯ ಅಪರಾಧ ಸಂಹಿತೆಯಲ್ಲಿ (ಐಪಿಸಿ) ನಿಸರ್ಗದ ನಡೆಗೆ ವಿರುದ್ಧವಾಗಿ ಮನುಷ್ಯ ಮನುಷ್ಯರ ನಡುವೆ ಅಥವಾ ಮನುಷ್ಯ ಹಾಗೂ ಪ್ರಾಣಿಗಳ ನಡುವೆ ನಡೆಯುವ ಸಂಭೋಗಕ್ಕೆ ಹತ್ತು ವರ್ಷಗಳ ಕಾಲ ಸೆರೆವಾಸವನ್ನು ವಿಧಿಸುವ ಅಧಿಕಾರವನ್ನು ಸೆಕ್ಷನ್‌ 377 ನೀಡಿತ್ತು.

ಹೈಕೋರ್ಟ್‌ ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರದಿಂದ ಸೂಚನೆಗಳನ್ನು ಪಡೆದು ಮಾಹಿತಿ ನೀಡುವುದಾಗಿ ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಅಹ್ಲುವಾಲಿಯಾ ಈ ವೇಳೆ ಹೇಳಿದರು.