Manish Sisodia and Delhi HC
Manish Sisodia and Delhi HC  Facebook
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

Bar & Bench

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನಿರಾಕರಿಸಿದೆ.

ಆದಾಗ್ಯೂ, ತಮಗೆ ಅನುಕೂಲವಾದ ದಿನದಂದು ಬೆಳಗ್ಗೆ 10ರಿಂದ ಸಂಜೆ 5ರ ನಡುವೆ ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿ ಮಾಡಲು ಸಿಸೋಡಿಯಾ ಅವರಿಗೆ ನ್ಯಾಯಾಲಯ ಅನುಮತಿಸಿದೆ.

“ಮನೀಶ್‌ ಸಿಸೋಡಿಯಾ ಅವರಿಗೆ ಜಾಮೀನು ನೀಡುವಂತೆ ಈ ನ್ಯಾಯಾಲಯದ ಮನವೊಲಿಕೆಯು ಕಷ್ಟಕರ ಎನ್ನುವುದನ್ನು ಖುದ್ದು ಕಂಡುಕೊಳ್ಳಲಾಗಿದೆ. ಆದಾಗ್ಯೂ, ಮನೀಶ್‌ ಸಿಸೋಡಿಯಾ ಅವರನ್ನು ಅವರ ಪತ್ನಿ ಇರುವ ಮನೆ ಅಥವಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಗಿದೆ. ಬೆಳಗ್ಗೆ 10ರಿಂದ ಸಂಜೆ 5ರ ಒಳೆ ಕರೆದೊಯ್ಯಬೇಕು” ಎಂದು ಪೀಠ ಆದೇಶಿಸಿದೆ.  

ಈ ಅವಧಿಯಲ್ಲಿ, ಅರ್ಜಿದಾರರು ತಮ್ಮ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೊಂದಿಗೂ ಸಂವಹನ ನಡೆಸಬಾರದು ಎಂದು ನ್ಯಾಯಾಲಯವು ಹೇಳಿತು. ಅಲ್ಲದೆ ಈ ವೇಳೆ ಮಾಧ್ಯಮಗಳು ಸಿಸೋಡಿಯಾ ಅವರನ್ನು ಭೇಟಿಯಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ನಿರ್ದೇಶಿಸಿತು. ಮುಂದುವರೆದು, ಈ ಸಂದರ್ಭದಲ್ಲಿ ಸಿಸೋಡಿಯಾ ಅವರು ಮೊಬೈಲ್‌ ಫೋನ್‌ ಇಲ್ಲವೇ ಅಂತರ್ಜಾಲವನ್ನು ಬಳಸುವಂತಿಲ್ಲ ಎಂದು ತಾಕೀತು ಮಾಡಿತು.

ತೀರ್ಪಿನ ವೇಳೆ ಸಿಸೋಡಿಯಾ ಅವರ ಪತ್ನಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡುವಂತೆಯೂ ನ್ಯಾಯಾಲಯ ಸೂಚಿಸಿದೆ. ಜಾರಿ ನಿರ್ದೇಶನಾಲಯ ದಾಖಲಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿದ್ದ ಸಿಸೋಡಿಯಾ ಅವರ ಅರ್ಜಿಯನ್ನು ಆಲಿಸಿದ್ದ ನ್ಯಾಯಾಲಯವು  ಜೂನ್ 3, ಶನಿವಾರ ಈ ಸಂಬಂಧ ಆದೇಶ ಕಾಯ್ದಿರಿಸಿತ್ತು. ಇಂದು ಆದೇಶವನ್ನು ನ್ಯಾ. ದಿನೇಶ್‌ ಕುಮಾರ್‌ ಶರ್ಮಾ ಪ್ರಕಟಿಸಿದರು.

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸೋಡಿಯಾ ಅವರನ್ನು ಈ ಹಿಂದೆ ಬಂಧಿಸಿದ್ದವು.