Navneet Kalra, Townhall, Khan chacha 
ಸುದ್ದಿಗಳು

ನವನೀತ್‌ ಕಲ್ರಾ ಒಡೆತನದ ಖಾನ್‌ ಚಾಚಾ, ಟೌನ್‌ ಹಾಲ್‌ ಪರವಾನಗಿ ರದ್ದು: ದೆಹಲಿ ಹೈಕೋರ್ಟ್‌ಗೆ ವಿವರಣೆ

ಕಲ್ರಾ ಅವರು ನೋಂದಣಿ ಸರ್ಟಿಫಿಕೇಟ್‌ ಷರತ್ತುಗಳನ್ನು ಉಲ್ಲಂಘಿಸಿದ್ದು, ಷೋಕಾಸ್‌ ನೋಟಿಸ್‌ಗೆ ಅವರು ನೀಡಿರುವ ಪ್ರತಿಕ್ರಿಯೆ ಸಮಾಧಾನಕರವಾಗಿಲ್ಲ ಎಂದು ಸಂಬಂಧಪಟ್ಟ ಪರವಾನಗಿ ಪ್ರಾಧಿಕಾರ ಹೇಳಿದೆ.

Bar & Bench

ತನ್ನ ಒಡೆತನದ ರೆಸ್ಟೋರೆಂಟ್‌ಗಳಾದ ಖಾನ್‌ ಚಾಚಾ ಮತ್ತು ಟೌನ್‌ ಹಾಲ್‌ಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಶುಕ್ರವಾರ ಉದ್ಯಮಿ ನವನೀತ್‌ ಕಲ್ರಾ ಅವರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಆಮ್ಲಜನಕ ಸಾಂದ್ರಕಗಳನ್ನು ಅಕ್ರಮವಾಗಿ ಶೇಖರಿಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಈ ಹಿಂದೆ ಕಲ್ರಾ ಅವರ ಅವರ ಒಡೆತನದ ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ದಾಳಿ ಮಾಡಿ ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದ್ದರು.

ಖಾನ್‌ ಚಾಚಾ ಮತ್ತು ಟೌನ್‌ ಹಾಲ್‌ ರೆಸ್ಟೋರೆಂಟ್‌ಗಳ ಪರವನಾಗಿಯನ್ನು ಪರವಾನಗಿ ಪ್ರಾಧಿಕಾರವು ರದ್ದು ಮಾಡಿದೆ ಎಂದು ಕಲ್ರಾ ಪರ ವಕೀಲ ಗುರಿಂದರ್‌ ಪಾಲ್‌ ಸಿಂಗ್‌ ಅವರು ನ್ಯಾಯಮೂರ್ತಿ ರೇಖಾ ಪಲ್ಲಿ ಅವರಿಗೆ ತಿಳಿಸಿದರು. ಕಲ್ರಾ ಮನವಿಯಲ್ಲಿನ ಹೇಳಿಕೆಗಳ ಕುರಿತು ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಪೀಠವು ಹೇಳಿದೆ.

ತಮ್ಮ ಅಹವಾಲುಗಳಿಗೆ ಸಂಬಂಧಿಸಿದಂತೆ ಕಾನೂನು ನೆರವು ಕೋರಲು ಕಲ್ರಾಗೆ ನ್ಯಾಯಾಲಯ ಅನುಮತಿಸಿದೆ. ಖಾನ್‌ ಚಾಚಾ ಮತ್ತು ಟೌನ್‌ ಹಾಲ್‌ ರೆಸ್ಟೋರೆಂಟ್‌ಗಳ ಪರವಾನಗಿ ರದ್ದತಿಗೆ ಸಂಬಂಧಿಸಿದಂತೆ ದೆಹಲಿಯ ಪರವಾನಗಿ ಪ್ರಾಧಿಕಾರದ ಜಂಟಿ ಪೊಲೀಸ್‌ ಆಯುಕ್ತರು ನೀಡಿರುವ ಷೋಕಾಸ್‌ ನೋಟಿಸ್‌ಗಳ ವಿಚಾರಣೆ ಅಂತಿಮಗೊಳ್ಳುವವರೆಗೆ ಪರವಾನಗಿ ರದ್ದು ಮಾಡಬಾರದು ಎಂದು ಅವರು ಕೋರಿದ್ದಾರೆ.

2020-21ನೇ ಸಾಲಿನಲ್ಲಿ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್‌ 15ರಂದು ಕಲ್ರಾ ಮನವಿ ಸಲ್ಲಿಸಿದ್ದಾರೆ. ಕಲ್ರಾ ಮರು ಪರವಾನಗಿಗೆ ಮನವಿ ಸಲ್ಲಿಸಿದ್ದರು. ಆದರೆ, ಸ್ಥಳೀಯ ಪೊಲೀಸರು ಕಲ್ರಾ ರೆಸ್ಟೋರೆಂಟ್‌ ಒಂದರಲ್ಲಿ ಆಮ್ಲಜನಕ ಸಾಂದ್ರಕಗಳನ್ನು ವಶಪಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಎರಡು ರೆಸ್ಟೋರೆಂಟ್‌ಗಳ ಕಾರ್ಯನಿರ್ವಹಣೆಗೆ ನಿರ್ಬಂಧ ವಿಧಿಸುವ ಸಂಬಂಧ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಪರವಾನಗಿ ಪ್ರಾಧಿಕಾರ ಉಲ್ಲೇಖಿಸಿದೆ.

ರೆಸ್ಟೋರೆಂಟ್‌ಗಳು ತನ್ನ ಜೀವನಾಧಾರವಾಗಿದ್ದು, ಲಾಕ್‌ಡೌನ್‌ನಿಂದ ಉದ್ಯಮಕ್ಕೆ ಹೊಡೆತ ಬಿದ್ದದ್ದರಿಂದ ಅಲ್ಲಿ ಸದುದ್ದೇಶದಿಂದ ಆಮ್ಲಜನಕ ಸಾಂದ್ರಕಗಳನ್ನು ಸಂಗ್ರಹಿಸಿಟ್ಟಿದ್ದಾಗಿ ಕಲ್ರಾ ಅವರು ಷೋಕಾಸ್‌ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಬಂಧನದಲ್ಲಿದ್ದ ಕಲ್ರಾ ಅವರಿಗೆ ಜಾಮೀನು ದೊರೆತ ಬಳಿಕ ಜುಲೈ 23ರಂದು ಪರವಾನಗಿ ಪ್ರಾಧಿಕಾರವು ಖುದ್ದಾಗಿ ಅವರ ಅಹವಾಲನ್ನು ಆಲಿಸಿದೆ. ನೋಂದಣಿ ಸರ್ಟಿಫಿಕೇಟ್‌ನಲ್ಲಿನ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂದು ಕಲ್ರಾ ಹೇಳಿದ್ದಾರೆ. ಆದರೆ, ಕಲ್ರಾ ಅವರ ಮನವಿಯು ಸಮಾಧಾನಕರವಾಗಿಲ್ಲ ಎಂದು ಪ್ರಾಧಿಕಾರ ಹೇಳಿದೆ. “ಹೀಗಾಗಿ, ನೋಂದಣಿ ಸರ್ಟಿಫಿಕೇಟ್ ಅನ್ನು ಪರವಾನಗಿ ಪ್ರಾಧಿಕಾರವು ರದ್ದುಗೊಳಿಸಿದೆ” ಎಂದು ಹೇಳಲಾಗಿದೆ.