Arvind Kejriwal  Facebook
ಸುದ್ದಿಗಳು

ಕೇಜ್ರಿವಾಲ್‌ ಜಾಮೀನು ಕೋರಿಕೆ: ಸಿಬಿಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್‌

ಕೇಜ್ರಿವಾಲ್ ಅವರು ಜಾಮೀನು ಕೋರಿ ಮೊದಲು ವಿಚಾರಣಾ ನ್ಯಾಯಾಲಯಕ್ಕೆ ತೆರಳುವ ಬದಲು ನೇರವಾಗಿ ಹೈಕೋರ್ಟ್‌ಗೆ ಬಂದಿರುವುದನ್ನು ಗಮನಿಸಿದ ನ್ಯಾಯಾಲಯ.

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಸಿಬಿಐನ ಪ್ರತಿಕ್ರಿಯೆಯನ್ನು ಕೋರಿದ್ದು, ಪ್ರಕರಣವನ್ನು ಜುಲೈ 17ಕ್ಕೆ ಮುಂದಿನ ವಿಚಾರಣೆಗೆ ಮುಂದೂಡಿದ್ದಾರೆ. ಇದೇ ವೇಳೆ, ಕೇಜ್ರಿವಾಲ್ ಅವರು ಜಾಮೀನು ಕೋರಿ ಮೊದಲು ವಿಚಾರಣಾ ನ್ಯಾಯಾಲಯಕ್ಕೆ ತೆರಳುವ ಬದಲು ನೇರವಾಗಿ ಹೈಕೋರ್ಟ್‌ಗೆ ಬಂದಿರುವುದೇಕೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. "ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಹೋಗದೆ ನೇರವಾಗಿ ಈ ನ್ಯಾಯಾಲಯವನ್ನು ಎಡತಾಕಿದ್ದಾರೆ. ಈ ಆಕ್ಷೇಪಣೆಯನ್ನು ನಂತರದ ಹಂತದಲ್ಲಿ ಪರಿಗಣಿಸಲಾಗುವುದು" ಎಂದು ಅವರು ಹೇಳಿದರು. ಮುಂದುವರೆದು, ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ಸಂಬಂಧ "ಸಿಬಿಐ ಒಂದು ವಾರದಲ್ಲಿ ಉತ್ತರವನ್ನು ಸಲ್ಲಿಸಬೇಕು," ಎಂದು ಸೂಚಿಸಿದರು.

ಇಂದು ನಡೆದ ವಿಚಾರಣೆಯಲ್ಲಿ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರಕರಣದ ವಿಚಾರಣೆ ನಡೆಸಲು ಹೈಕೋರ್ಟ್‌ಗೆ ಅಧಿಕಾರವಿದೆ ಎಂದು ಹೇಳಿದರು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ಚೌಧರಿ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41ಎ (ವಾರೆಂಟ್ ಇಲ್ಲದೆ ಬಂಧಿಸುವ ಮುನ್ನ ಆರೋಪಿಗೆ ನೋಟಿಸ್ ನೀಡಿದ ಮೇಲೆ) ಉಲ್ಲಂಘಿಸಲಾಗಿದೆ ಎಂದು ವಾದಿಸಿದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 45ರ ಅಡಿ ಜಾಮೀನು ನೀಡಲು ಅನ್ವಯಿಸಲಾಗುವ ಅವಳಿ ಷರತ್ತುಗಳ ಸಿಬಿಐ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ ಎಂದು ಸಿಂಘ್ವಿ ವಾದ ಮಂಡಿಸಿದರು.

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು. ಜೂನ್ 20 ರಂದು ಇ ಡಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಆದರೆ, ಇದನ್ನು ಆಕ್ಷೇಪಿಸಿ ಸಿಬಿಐ ದೆಹಲಿ ಹೈಕೋರ್ಟ್ ಎಡತಾಕಿದ ಹಿನ್ನೆಲೆಯಲ್ಲಿ ಜೂನ್ 25 ರಂದು ದೆಹಲಿ ಹೈಕೋರ್ಟ್ ಜಾಮೀನಿಗೆ ತಡೆ ನಿಡಿತ್ತು.

ಈ ಹಿನ್ನೆಲೆಯಲ್ಲಿ ಜೂನ್ 26ರಂದು ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿ ನ್ಯಾಯಾಲಯದ ಮುಂದೆ ಕಸ್ಟಡಿಗೆ ಕೋರಿತ್ತು. ನ್ಯಾಯಾಲಯವು ಜೂನ್ 29ರವರೆಗೆ ಕೇಜ್ರಿವಾಲ್‌ ಅವರನ್ನು ಸಿಬಿಐ ಕಸ್ಟಡಿಗೆ ನೀಡಿತ್ತು. ಜೂನ್ 29 ರಂದು ಸಿಬಿಐ ಕಸ್ಟಡಿ ವಿಸ್ತರಣೆಯನ್ನು ಕೋರದ ಹಿನ್ನೆಲೆಯಲ್ಲಿ ಜುಲೈ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಜುಲೈ 3ರಂದು ಸಿಬಿಐ ಪ್ರಕರಣದಲ್ಲಿ ಜಾಮೀನು ಕೋರಿ ಕೇಜ್ರಿವಾಲ್‌ ನೇರವಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸಿಬಿಐ ತನ್ನ ಬಂಧನವನ್ನು ಪ್ರಶ್ನಿಸಿರುವುದನ್ನು ಆಕ್ಷೇಪಿಸಿ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಮನವಿ ಮತ್ತು ಅವರನ್ನು ಕಸ್ಟಡಿಗೆ ಒಪ್ಪಿಸುವ ವಿಚಾರಣಾ ನ್ಯಾಯಾಲಯದ ಆದೇಶವೂ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.