ಸುದ್ದಿಗಳು

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಜುಲೈ 31 ರೊಳಗೆ ಸದಸ್ಯರ ನಾಮನಿರ್ದೇಶನ ಮಾಡಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್

Bar & Bench

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಜುಲೈ 31ರೊಳಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕ-ಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಆಯೋಗವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ತನ್ನ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಈ ಹಿಂದೆ ಜುಲೈ 15 ರ ಗಡುವನ್ನು ನೀಡಿದ್ದ ನ್ಯಾಯಾಲಯ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರ ಕೋರಿಕೆಯ ಮೇರೆಗೆ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನೂ ಸ್ವಲ್ಪ ಸಮಯ ನೀಡಿತು. ನಾಮನಿರ್ದೇಶನ ಮಾಡಲು ಯತ್ನಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬಾರದು ಎಂದು ಎಎಸ್‌ಜಿ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ನಾಮನಿರ್ದೇಶನಕ್ಕೆ ಯತ್ನಿಸುವುದಲ್ಲ ನೀವು ಅದನ್ನು ಮಾಡಲೇಬೇಕಾಗುತ್ತದೆ ಎಂದು ಅದು ತಾಕೀತು ಮಾಡಿತು.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರಕ್ಕೆ ನಿರ್ದೇಶನ ಕೋರಿ ಅಭಯ್ ರತನ್ ಬೌದ್ಧ್‌ ಅವರು ಅರ್ಜಿ ಸಲ್ಲಿಸಿದ್ದರು. ಆಯೋಗದಲ್ಲಿ ಉಪಾಧ್ಯಕ್ಷರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಬೌದ್ಧ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಮತ್ತು ಜೈನ ಸಮುದಾಯಗಳ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಖಾಲಿ ಇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಆಯೋಗ ಉಪಾಧ್ಯಕ್ಷರ ನೇತೃತ್ವದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಬೌದ್ಧ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಮತ್ತು ಜೈನ ಸಮುದಾಯಗಳ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಖಾಲಿ ಇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಆದರೆ ಆಯೋಗ ಸುಗಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಉಪಾಧ್ಯಕ್ಷರಿಗೆ 5ರಿಂದ 6 ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಅಲ್ಲದೆ ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಮತ್ತು ಕೋವಿಡ್‌ ಕಾರಣದಿಂದಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ, ಇದಕ್ಕಾಗಿ 90 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ಹೇಳಿತ್ತು. ಕೇಂದ್ರದ ಪ್ರತಿಕ್ರಿಯೆ ಬಗ್ಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತ್ತು.

1992ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಕಾಯಿದೆಯಲ್ಲಿ ಸದಸ್ಯರ ನೇಮಕಕ್ಕೆ ಯಾವುದೇ ಸಮಯ ನಿಗದಿಪಡಿಸಿಲ್ಲ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಈ ಮೊದಲು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಿತ್ತು. ಎಎಸ್‌ಜಿ ಶರ್ಮಾ ಅವರು “ಗಡುವಿಗೆ ತಕ್ಕಂತೆ ನೇಮಕಾತಿ ಮಾಡಬೇಕಾಗಿದೆ ಎಂದು ಒಪ್ಪಿಕೊಂಡಿದ್ದು ಈ ಸಂಬಂಧ ಕೇಂದ್ರ ಸರ್ಕಾರ ಉತ್ತಮ ಅಫಿಡವಿಟ್‌ ಸಲ್ಲಿಸಲಿದೆ ಎಂದು ತಿಳಿಸಿದ್ದರು.

ತನ್ನ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯ ಮುಂದಿನ ಆಗಸ್ಟ್‌ಗೆ ವಿಚಾರಣೆ ನಿಗದಿ ಪಡಿಸಿದೆ. ಅರ್ಜಿದಾರರ ಪರವಾಗಿ ವಕೀಲ ಮನನ್‌ ಅಗರ್‌ವಾಲ್‌ ಹಾಗೂ ಎಎಸ್‌ಜಿ ಅವರ ಜೊತೆ ವಕೀಲ ಜೀವೇಶ್‌ ಕುಮಾರ್‌ ಸರ್ಕಾರದ ಪರವಾಗಿ ವಾದ ಮಂಡಿಸಿದರು.