ತುಷ್ಟೀಕರಣ ಹಾಗೂ ಒಲೈಕೆ ರಾಜಕಾರಣಕ್ಕೆ ಪ್ರಬಲ ಅಸ್ತ್ರವಾಗಬಲ್ಲ, ಈಶಾನ್ಯ ರಾಜ್ಯಗಳಲ್ಲಿ ವಿರಳ ಸಂಖ್ಯೆಯಲ್ಲಿರುವ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಬೇಕು ಎಂಬ ಕೂಗಿಗೆ ಬಲಬಂದಿದ್ದು, ಕಾನೂನು ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ. 'ಟಿಎಂಎ ಪೈ ಮತ್ತು ಇತರರು ವರ್ಸಸ್ ಕರ್ನಾಟಕ ರಾಜ್ಯ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿರುವಂತೆ ನಾಗಲ್ಯಾಂಡ್, ಮಿಜೊರಾಂ ಮತ್ತು ಮೇಘಾಲಯದಲ್ಲಿರುವ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಘೋಷಿಸುವತೆ ಗುವಾಹಟಿ ಮತ್ತು ಮೇಘಾಲಯ ಹೈಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ (ದೆಲಿನಾ ಕೋಂಗ್ಡುಪ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಪಂಕಜ್ ದೇಕಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ).
ಮೇಘಾಲಯ ಹೈಕೋರ್ಟ್‌ನಲ್ಲಿ ದೆಲಿನಾ ಕೋಂಗ್ಡುಪ್ ಅರ್ಜಿ ಸಲ್ಲಿಸಿದ್ದು, ಪಂಕಜ್ ದೇಕಾ ಅವರು ವಕೀಲ ಎಚ್ ತಾಲೂಕುದಾರ್ ಅವರ ಮೂಲಕ ಗುವಾಹಟಿ ಹೈಕೋರ್ಟ್ ಮನವಿ ಮಾಡಿದ್ದಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಬೌದ್ಧರು, ಪಾರ್ಸಿಗಳು ಮತ್ತು ಜೈನರನ್ನು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿಸಿರುವ 1993ರ ಅಕ್ಟೋಬರ್ 23ರಂದು ಹೊರಡಿಸಲಾದ ಅಧಿಸೂಚನೆಯನ್ನು ಇಬ್ಬರೂ ಮನವಿದಾರರು ಪ್ರಶ್ನಿಸಿದ್ದಾರೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಾಗಿದ್ದಾರೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
ಪ್ರತಿ ರಾಜ್ಯದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರನ್ನು ಗುರುತಿಸುವಂತಾಗಬೇಕೆ ವಿನಾ ರಾಷ್ಟ್ರೀಯ ಜನಸಂಖ್ಯೆಯ ಆಧಾರದಲ್ಲಿ ಅಲ್ಲ. ರಾಷ್ಟ್ರೀಯ ಅಂಕಿಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡರೆ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸೌಲಭ್ಯಗಳು ದೊರೆಯುವುದಿಲ್ಲ ಎಂದು ತಕರಾರು ಎತ್ತಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾದ ಸೌಲಭ್ಯಗಳನ್ನು ಮೇಲೆ ಉಲ್ಲೇಖಿಸಿದ ರಾಜ್ಯಗಳಲ್ಲಿ ಬಹುಸಂಖ್ಯಾತರು ಅನುಭವಿಸುತ್ತಿದ್ದಾರೆ. ಈ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಈ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರಿಗೆ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಸಂವಿಧಾನದ ವ್ಯಾಖ್ಯಾನ ಅತ್ಯಗತ್ಯ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಭಾಷಾ ಅಲ್ಪಸಂಖ್ಯಾತರನ್ನು ಆಯಾ ರಾಜ್ಯಗಳಿಗೆ ಅನುಗುಣವಾಗಿ ನಿರ್ಧರಿಸಬೇಕು ಎಂದು ಐತಿಹಾಸಿಕ ಟಿಎಂಎ ಪೈ ತೀರ್ಪಿನಲ್ಲಿ ಹೇಳಲಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರಾದೇಶಿಕ ರೇಖೆಯ ಆಧಾರದಲ್ಲಿ ಗಣನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮಿಜೊರಾಂ, ಗೋವಾ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ರಾಜ್ಯಗಳಲ್ಲಿ (ಹಿಂದೂಗಳು ಮತ್ತು ಸ್ಥಳೀಯ ಬುಡಕಟ್ಟು ಸಮುದಾಯ) ವಾಸ್ತವದಲ್ಲಿ ಅಲ್ಪಸಂಖ್ಯಾತರಾದ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರನ್ನು ಗುರುತಿಸದ ಕೇಂದ್ರ ಸರ್ಕಾರದ ನಡೆಯು ಶಾಸನಬದ್ಧವಾಗಿ ದೊರೆತಿರುವ ಅಧಿಕಾರದ ವ್ಯರ್ಥ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಚಾಲ್ತಿಯಲ್ಲಿರುವ 1993ರಲ್ಲಿ ಹೊರಡಿಸಲಾದ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಉಲ್ಲೇಖಿತ ಧರ್ಮಗಳಲ್ಲಿ ತಾರತಮ್ಯ, ಸರ್ಕಾರಿ ಉದ್ಯೋಗದಲ್ಲಿ ದೊರೆಯಬೇಕಾದ ಸಮಾನ ಹಕ್ಕನ್ನು ಕಸಿಯುವುದು, ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದ ಬೋಧನೆ, ಪ್ರಚಾರ ಮತ್ತು ಅನುಸರಿಸುವ ಹಕ್ಕಿಗೆ ವಿರುದ್ಧವಾಗಿವೆ ಎಂದು ಹೇಳಲಾಗಿದೆ.
ಅಲ್ಲದೆ, ಆಡಳಿತವು ಇಲ್ಲಿನ ಜನರ ಸ್ಥಿತಿಗತಿಯಲ್ಲಿನ ಅಸಮಾನತೆ, ಸವಲತ್ತು ಮತ್ತು ಅವಕಾಶಗಳ ಹಂಚಿಕೆಯಲ್ಲಿನ ತಾರತಮ್ಯವನ್ನು ಸರಿಪಡಿಸುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಸದರಿ ರಾಜ್ಯಗಳಲ್ಲಿ ಹಿಂದೂಗಳು ಮತ್ತು ಸ್ಥಳೀಯ ಧಾರ್ಮಿಕ ಗುಂಪುಗಳ ಹಿತಾಸಕ್ತಿ ಕಾಯಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಮರ್ಥನೆ ನೀಡಲಾಗಿದೆ.