ಸುದ್ದಿಗಳು

ಪ್ರತ್ಯೇಕತಾವಾದಿ ಯಾಸೀನ್‌ ಮಲಿಕ್‌ ಆರೋಗ್ಯ ಸ್ಥಿತಿ ಕುರಿತು ವೈದ್ಯಕೀಯ ವರದಿ ಸಲ್ಲಿಸಲು ದೆಹಲಿ ಹೈಕೋರ್ಟ್‌ ಆದೇಶ

ಸರ್ಕಾರವು ತನ್ನ ಹೃದಯ ಸಂಬಂಧಿ ಮತ್ತು ಮೂತ್ರಪಿಂಡ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಕೊಡಿಸಲು ತಾತ್ಸಾರ ಭಾವ ಹೊಂದಿದೆ ಎನ್ನುವುದು ನವೆಂಬರ್‌ 1ರಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಯಾಸೀನ್‌ ಮಲಿಕ್‌ ಆರೋಪ.

Bar & Bench

ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಸಮಸ್ಯೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ತುರ್ತಾಗಿ ಚಿಕಿತ್ಸೆ ಪಡೆಯಲು ಅನುಮತಿಸುವಂತೆ ಕೋರಿ ದೋಷಿ ಎಂದು ಘೋಷಿತವಾಗಿರುವ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸೀನ್‌ ಮಲಿಕ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ದೆಹಲಿ ಕಾರಾಗೃಹ ನಿಯಮಗಳು 2018ರ ಅನ್ವಯ ಮಲಿಕ್‌ಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ತಿಹಾರ್‌ ಜೈಲು ಮೇಲ್ವಿಚಾರಕರಿಗೆ ನ್ಯಾಯಮೂರ್ತಿ ಅನೂಪ್‌ ಕುಮಾರ್‌ ಮೆಂಡಿರಟ್ಟಾ ಅವರು ಆದೇಶಿಸಿದ್ದಾರೆ.

ಮಲಿಕ್‌ ಹೃದಯ ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಕೋರಿ ನವೆಂಬರ್‌ 1ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಎಂದು ಮಲಿಕ್‌ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಲಿಕ್‌ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿತು.

ಭಯೋತ್ಪಾದನಾ ಕೃತ್ಯಕ್ಕೆ ಹಣಕಾಸು ನೆರವು ನೀಡಿದ ಆರೋಪ ಸಂಬಂಧ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ ಅಡಿ ದೋಷಿ ಎಂದು ಘೋಷಿತರಾಗಿರುವ ಯಾಸೀನ್‌ ಮಲಿಕ್‌ ತಿಹಾರ್‌ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆತ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್‌ ಫ್ರಂಟ್‌ನ ಮಾಜಿ ಮುಖ್ಯಸ್ಥನಾಗಿದ್ದಾನೆ.