ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಡೆಸಿಕೊಡುವ 'ವಾಟ್ ವಿಮೆನ್ ವಾಂಟ್ ' ಕಾರ್ಯಕ್ರಮದ ವಸ್ತುವಿಷಯವನ್ನು ಬಳಸಿಕೊಳ್ಳಲಾಗಿದೆ ಎಂದು ಜೀವನಶೈಲಿ ವಸ್ತುವಿಷಯ ಜಾಲತಾಣ ಮಿಸ್ ಮಾಲಿನಿ ವಿರುದ್ಧ ಕೃತಿ ಸ್ವಾಮ್ಯ ಮೊಕದ್ದಮೆ ಹೂಡಿದ್ದ ರೇಡಿಯೊ ಕಂಪೆನಿ ರೇಡಿಯೊ ಮಿರ್ಚಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಪರಿಹಾರ ನೀಡಿದೆ [ಎಂಟರ್‌ಟೈನ್‌ಮಂಟ್ ನೆಟ್‌ವರ್ಕ್ ಇಂಡಿಯಾ ಲಿಮಿಟೆಡ್ ಮತ್ತು ಮಿಸ್ ಮಾಲಿನಿ ಎಂಟರ್‌ಟೈನ್‌ಮಂಟ್ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].
ತನ್ನ ಕಾರ್ಯಕ್ರಮದ ಲೋಗೋಗಳನ್ನು ಮಸುಕಾಗಿಸಿ ಕಾರ್ಯಕ್ರಮದ ತುಣುಕುಗಳನ್ನು ಮಿಸ್ ಮಾಲಿನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (ಎಂಇಪಿಎಲ್) ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಸಾರ ಮಾಡಿದೆ ಎಂದು ಎಫ್ ಎಂ ರೇಡಿಯೊ ಮಿರ್ಚಿಯ ಒಡೆತನ ಹೊಂದಿರುವ ಎಂಟರ್‌ಟೈನ್‌ಮಂಟ್ ನೆಟ್‌ವರ್ಕ್ ಇಂಡಿಯಾ ಲಿಮಿಟೆಡ್ ದೂರಿತ್ತು.
ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳ ವಿಶೇಷ ಒಡೆತನ ತನ್ನದಾಗಿದ್ದು ಮಿಸ್ ಮಾಲಿನಿ ಎಂಟರ್‌ಟೈನ್‌ಮಂಟ್ ಪ್ರೈವೇಟ್ ಲಿಮಿಟೆಡ್ ಕಾರ್ಯಕ್ರಮದ ಪ್ರಚಾರಕ್ಕಾಗಿ ತನ್ನೊಂದಿಗೆ ತೊಡಗಿಕೊಂಡಿತ್ತು ಎಂದು ಅದು ಹೇಳಿತ್ತು.
ವಾದ ಆಲಿಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ರೇಡಿಯೊ ಮಿರ್ಚಿ ಪರವಾಗಿ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿದರು. ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ಮಿರ್ಚಿ ಉಲ್ಲೇಖಿಸಿರುವ ವೀಡಿಯೊ ಕ್ಲಿಪ್‌ಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕುವಂತೆ ಇದೇ ವೇಳೆ ಅವರು ಆದೇಶಿಸಿದರು.
ಅಲ್ಲದೆ ಮುಂದಿನ ವಿಚಾರಣೆಯವರೆಗೂ (ಮೇ 13) ರೇಡಿಯೊ ಮಿರ್ಚಿ ಹಕ್ಕು ಸ್ವಾಮ್ಯ ಇರುವ ವಸ್ತುವಿಷಯಗಳನ್ನು ತನ್ನ ಯಾವುದೇ ವೇದಿಕೆ ಸಾಮಾಜಿಕ ಮಾಧ್ಯಮ ಇಲ್ಲವೇ ಬಹು ಮಾಧ್ಯಮಗಳಲ್ಲಿ ಬಳಸದಂತೆ ಮಿಸ್ ಮಾಲಿನಿ ಎಂಟರ್‌ಟೈನ್‌ಮಂಟ್ ಪ್ರೈವೇಟ್ ಲಿಮಿಟೆಡ್‌ಗೆ ಅದು ತಾಕೀತು ಮಾಡಿತು.
ಯೂಟ್ಯೂಬ್‌ನಲ್ಲಿ ಪ್ರಸಾರವಾದ ವಿವಾದಲ್ಲಿರುವ ವಿಡಿಯೋಗಳ ಹಕ್ಕು ಸ್ವಾಮ್ಯ ತನ್ನದೆಂದು ಸಾರಿ ರೇಡಿಯೊ ಮಿರ್ಚಿ ಈ ಹಿಂದೆ ನೋಟಿಸ್ ನೀಡಿತ್ತು. ಆದರೂ ಕೆಲ ವೀಡಿಯೊಗಳನ್ನು ಮಿಸ್ ಮಾಲಿನಿ ತೆಗೆದುಹಾಕದೆ ಇದ್ದುದರಿಂದ ರೇಡಿಯೊ ಮಿರ್ಚಿ ದೆಹಲಿ ಹೈಕೋರ್ಟ್ ಕದ ತಟ್ಟಿತ್ತು.