ಕೆಜಿಎಫ್‌ ಕೃತಿ ಸ್ವಾಮ್ಯ ಉಲ್ಲಂಘನೆ: ನ್ಯಾಯಾಂಗ ನಿಂದನೆ ಅರ್ಜಿ ದಾಖಲು; ರಾಹುಲ್‌ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

ಎಂಆರ್‌ಟಿ ಮ್ಯೂಸಿಕ್‌ ಪರ ವಕೀಲ ಎಂ ಪ್ರಣವ್‌ ಕುಮಾರ್‌ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.
Karnataka HC and Rahul Gandhi, Jairam Ramesh, Supriya Shrinate
Karnataka HC and Rahul Gandhi, Jairam Ramesh, Supriya Shrinate

ಕೃತಿ ಸ್ವಾಮ್ಯ ಉಲ್ಲಂಘಿಸಿ ಕಾಂಗ್ರೆಸ್‌ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿರುವ ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತವನ್ನು ತೆರವುಗೊಳಿಸಲು ನಿರ್ದೇಶಿಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪಾಲಿಸಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್‌ ಪಕ್ಷವು ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ. ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತ ತೆರವು ಮಾಡಿಲ್ಲ. ಬದಲಿಗೆ ಹೆಚ್ಚುವರಿಯಾಗಿ ಸಂಗೀತ ಬಳಸಿದೆ ಎಂದು ಆಕ್ಷೇಪಿಸಿ ಎಂಆರ್‌ಟಿ ಮ್ಯೂಸಿಕ್‌ ನ್ಯಾಯಾಂಗ ನಿಂದನೆಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಲ್ಲದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್‌ ರಮೇಶ್‌ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್‌ ಜಾರಿ ಮಾಡಿದೆ.

ಎಂಆರ್‌ಟಿ ಮ್ಯೂಸಿಕ್‌ ಪರ ವಕೀಲ ಎಂ ಪ್ರಣವ್‌ ಕುಮಾರ್‌ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.

ನವೆಂಬರ್‌ 8ರಂದು ಬೆಂಗಳೂರಿನ 85ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ಪಿ ಎನ್‌ ದೇಸಾಯಿ ಅವರ ನೇತೃತ್ವದ ವಿಭಾಗೀಯ ಪೀಠವು “ಮೇಲ್ಮನವಿದಾರರಾದ ಕಾಂಗ್ರೆಸ್‌ ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೃತಿಸ್ವಾಮ್ಯ ಉಲ್ಲಂಘಿಸಿರುವ ವಿಷಯಗಳನ್ನು ತೆಗೆದು ಹಾಕಬೇಕು ಎಂಬ ಷರತ್ತಿಗೆ ಒಳಪಟ್ಟು ಆಕ್ಷೇಪಾರ್ಹವಾದ ಆದೇಶವನ್ನು (ವಾಣಿಜ್ಯ ನ್ಯಾಯಾಲಯದ) ಬದಿಗೆ ಸರಿಸಲಾಗಿದೆ” ಎಂದು ಆದೇಶಿಸಿತ್ತು.

ಕೃತಿಸ್ವಾಮ್ಯ ಉಲ್ಲಂಘಿಸಲಾಗಿದೆ ಎನ್ನಲಾದ ಟ್ವೀಟ್‌ಗಳನ್ನು ತಪ್ಪಾಗಿ ಮಾಡಲಾಗಿದ್ದು ಆ ಟ್ವೀಟ್‌ಗಳನ್ನು ನಾಳೆ ಮಧ್ಯಾಹ್ನದೊಳಗೆ ತೆಗೆದು ಹಾಕಲಾಗುವುದು ಎಂದು ಕಾಂಗ್ರೆಸ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ನೀಡಿದ ಭರವಸೆಯನ್ನು ದಾಖಲಿಸಿಕೊಂಡು ವಿಭಾಗೀಯ ಪೀಠವು ಈ ಆದೇಶ ಮಾಡಿತ್ತು. ಭರವಸೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಟ್ವಿಟರ್‌ ಖಾತೆ ನಿರ್ಬಂಧಿಸುವ ಅಗತ್ಯವಿಲ್ಲ ಎಂದು ಪೀಠ ಹೇಳಿತ್ತು. “ಖಾತೆ ನಿರ್ಬಂಧ ಕ್ರಮವು ದಂಡ ಸ್ವರೂಪದ್ದಾಗಿದೆ. ಸಾಕ್ಷ್ಯ ಸಂಗ್ರಹಿಸಲು ನಿರ್ದೇಶಿಸಿರುವುದು ಸರಿಯಾಗಿದೆ” ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತ್ತು.

Also Read
ಕೃತಿಸ್ವಾಮ್ಯ ಉಲ್ಲಂಘನೆ: ಕಾಂಗ್ರೆಸ್‌, ಭಾರತ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧ ಆದೇಶ ತೆರವುಗೊಳಿಸಿದ ಹೈಕೋರ್ಟ್‌

“ಕಾಂಗ್ರೆಸ್‌ ನೀಡಿದ್ದ ಭರವಸೆಗೆ ಒಳಪಟ್ಟು ಸದ್ಯಕ್ಕೆ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಲಾಗಿದೆ. ಇತರೆ ಮಧ್ಯಂತರ ಅರ್ಜಿಗಳನ್ನು ಪುನಾ ಪರಿಗಣಿಸಲಾಗುವುದು” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಅಧೀನ ನ್ಯಾಯಾಲಯವು “ಕೆಜಿಎಫ್‌ – 2 ಸಿನಿಮಾದ ಮುದ್ರಿತ ಸಂಗೀತವನ್ನು ಕಾನೂನುಬಾಹಿರವಾಗಿ ಕಾಂಗ್ರೆಸ್‌ ಮತ್ತು ಭಾರತ ಐಕ್ಯತಾ ಯಾತ್ರೆಯಲ್ಲಿ ಬಳಕೆ ಮಾಡಿರುವುದಕ್ಕೆ ಪ್ರೋತ್ಸಾಹ ನೀಡಿದರೆ ಫಿರ್ಯಾದಿಗೆ ಸರಿಪಡಿಸಲಾರದಷ್ಟು ಹಾನಿಯಾಗಲಿದೆ. ವಿಸ್ತೃತ ನೆಲೆಯಲ್ಲಿ ಇದು ಕೃತಿಚೌರ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ” ಎಂದು ತನ್ನ ಆದೇಶದಲ್ಲಿ ಹೇಳಿತ್ತು.

Kannada Bar & Bench
kannada.barandbench.com