New Balance 
ಸುದ್ದಿಗಳು

ಅಮೆರಿಕದ ಕ್ರೀಡಾ ಉಡುಪು ಕಂಪೆನಿಯ ನ್ಯೂ ಬ್ಯಾಲೆನ್ಸ್ ಮತ್ತು ಎನ್‌ಬಿ ವಾಣಿಜ್ಯ ಚಿಹ್ನೆ ಸುಪರಿಚಿತ: ದೆಹಲಿ ಹೈಕೋರ್ಟ್

"ಹೊಸ" ಮತ್ತು "ಬ್ಯಾಲೆನ್ಸ್" ಪದಗಳನ್ನು ಬೇರೆ ಯಾವುದೇ ಸರಕು ಅಥವಾ ಸೇವೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಬಳಸಿದರೆ ಅವುಗಳ ಮೇಲೆ ಯಾವುದೇ ಏಕಸ್ವಾಮ್ಯ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bar & Bench

ಅಮೆರಿಕ ಮೂಲದ ಕ್ರೀಡಾ ಪಾದರಕ್ಷೆ ಮತ್ತು ಉಡುಪು ತಯಾರಿಕೆ ಕಂಪೆನಿ ನ್ಯೂ ಬ್ಯಾಲೆನ್ಸ್ ಅಥ್ಲೆಟಿಕ್ಸ್ ಇಂಕ್‌ಗೆ ಸೇರಿದ ನ್ಯೂ ಬ್ಯಾಲೆನ್ಸ್‌ ಮತ್ತು ಎನ್‌ಬಿ ವಾಣಿಜ್ಯ ಚಿಹ್ನೆಗಳು ಸುಪರಿಚಿತ ವಾಣಿಜ್ಯ ಚಿಹ್ನೆಗಳೆಂದು ದೆಹಲಿ ಹೈಕೋರ್ಟ್‌ ಈಚೆಗೆ ಘೋಷಿಸಿದೆ ನ್ಯೂ ಬ್ಯಾಲೆನ್ಸ್ ಅಥ್ಲೆಟಿಕ್ಸ್ ಇಂಕ್ ಮತ್ತು ನ್ಯೂ ಬ್ಯಾಲೆನ್ಸ್ ಇಮಿಗ್ರೇಷನ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ʼನ್ಯೂ ಬ್ಯಾಲೆನ್ಸ್‌ʼ ವಾಣಿಜ್ಯ ಚಿಹ್ನೆ ಎಂಬುದು ʼನ್ಯೂʼ ಮತ್ತು ʼಬ್ಯಾಲೆನ್ಸ್‌ʼ ಎಂಬ ಎರಡು ಪದಗಳ ವಿಶಿಷ್ಟ ಸಂಯೋಜನೆಯಾಗಿದ್ದು ಇದು ಕಂಪೆನಿ ನೀಡುವ ಉತ್ಪನ್ನ ಅಥವಾ ಸೇವೆಗಳ ಸಂಬಂಧ, ಪ್ರಸ್ತಾಪ ಅಥವಾ ವಿವರಣೆ ಹೊಂದಿಲ್ಲ ಎಂದು ನ್ಯಾಯಮೂರ್ತಿ ಪ್ರತಿಬಾ ಎಂ ಸಿಂಗ್ ತಿಳಿಸಿದ್ದಾರೆ.

ಲೋಗೋ ಕೂಡ ಸಾಕಷ್ಟು ವಿಶಿಷ್ಟವಾಗಿದ್ದು ಅದರ ದುರುಪಯೋಗದ ವಿರುದ್ಧ ನ್ಯಾಯಾಲಯ ಹಲವು ಬಾರಿ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.

ಆದರೆ "ನ್ಯೂ" ಮತ್ತು "ಬ್ಯಾಲೆನ್ಸ್" ಪದಗಳನ್ನು ಬೇರೆ ಯಾವುದೇ ಸರಕು ಅಥವಾ ಸೇವೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಬಳಸಿದರೆ ಅವುಗಳ ಮೇಲೆ ಯಾವುದೇ ಏಕಸ್ವಾಮ್ಯ ಇರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಲಸೆ ಮತ್ತು ವೀಸಾ ಸಂಗ್ರಹ ಸೇವೆ ಒದಗಿಸುವ ನ್ಯೂ ಬ್ಯಾಲೆನ್ಸ್ ಇಮಿಗ್ರೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯೊಂದು ನ್ಯೂ ಬ್ಯಾಲೆನ್ಸ್‌ ಮತ್ತು ಎನ್‌ಬಿ ಎಂಬ ಪದಗಳನ್ನು ವಾಣಿಜ್ಯ ಚಿಹ್ನೆಯಾಗಿ ಬಳಸುತ್ತಿತ್ತು. ಇದು ತನ್ನ ವಾಣಿಜ್ಯ ಚಿಹ್ನೆ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿ ನ್ಯೂ ಬ್ಯಾಲೆನ್ಸ್ ಅಥ್ಲೆಟಿಕ್ಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.

ನ್ಯಾಯಾಲಯ ಈ ಹಿಂದೆ ಅಕ್ಟೋಬರ್ 12, 2022 ರಂದು ನ್ಯೂ ಬ್ಯಾಲೆನ್ಸ್ ಅಥ್ಲೆಟಿಕ್ಸ್ ಪರವಾಗಿ ಏಕಪಕ್ಷೀಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಜೂನ್ 1, 2023ರಂದು ತೀರ್ಪು ಹೊರಬಿದ್ದು ನ್ಯೂ ಬ್ಯಾಲೆನ್ಸ್ ಅಥ್ಲೆಟಿಕ್ಸ್‌ಗೆ, ನ್ಯೂ ಬ್ಯಾಲೆನ್ಸ್ ಇಮಿಗ್ರೇಷನ್ ಪ್ರೈವೇಟ್ ಲಿಮಿಟೆಡ್ ₹ 4 ಲಕ್ಷ ದಂಡ ಪಾವತಿಸುವಂತೆ ಸೂಚಿಸಲಾಗಿತ್ತು.