ಇನ್‌ಸ್ಟಾಗ್ರಾಂನಲ್ಲಿ ಹಿಂದೂ ದೇವರುಗಳ ಬಗ್ಗೆ "ಅತ್ಯಂತ ಕೀಳುಮಟ್ಟದ ಮತ್ತು ಆಕ್ಷೇಪಾರ್ಹ ಪೋಸ್ಟ್‌ಗಳನ್ನು" ಪ್ರಕಟಿಸಿರುವುದಕ್ಕೆ ಸಂಬಂಧಿಸಿದ ಮನವಿ ಆಧರಿಸಿ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಕೇಂದ್ರ ಸರ್ಕಾರ, ಇನ್‌ಸ್ಟಾಗ್ರಾಂ ಮತ್ತು ಅದರ ಮಾಲೀಕರಾದ ಫೇಸ್‌ಬುಕ್‌ಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶಿಸಿದ್ದಾರೆ.
ಅಪ್‌ಲೋಡ್ ಮಾಡಲಾದ ಮಾಹಿತಿಯಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ನಿಂದಿಸುವುದು ಮಾತ್ರವಲ್ಲದೇ ಗ್ರಾಫಿಕ್ಸ್ ಮತ್ತು ಕಾರ್ಟೂನ್‌ಗಳ ಮೂಲಕ ಅಶ್ಲೀಲವಾಗಿ ಬಿಂಬಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆಕ್ಷೇಪಾರ್ಹವಾದ ಮಾಹಿತಿಯನ್ನು ಈಗಾಗಲೇ ತೆಗೆದು ಹಾಕಲಾಗಿದೆ ಎಂದು ಇನ್‌ಸ್ಟಾಗ್ರಾಂ ನ್ಯಾಯಾಲಯದ ಮುಂದೆ ಹೇಳಿದೆ. ನೂತನ ಐಟಿ ನಿಯಮಗಳನ್ನು ಇನ್‌ಸ್ಟಾಗ್ರಾಂ ಪಾಲಿಸುತ್ತಿದೆಯೇ ಎಂಬುದನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ. ಹಾಗಾಗಿ, ನೂತನ ಐಟಿ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುವಂತೆ ಇನ್‌ಸ್ಟಾಗ್ರಾಂಗೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಅರ್ಜಿದಾರರು ಮನವಿ ಮಾಡಿದ್ದಾರೆ.
ಆಕ್ಷೇಪಾರ್ಹ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಹೆಚ್ಚಿನ ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಇಡುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ನಿಯಮಗಳ ಪ್ರಕಾರ ಅಹವಾಲು ಅಧಿಕಾರಿಯನ್ನು ನೇಮಿಸಿದ್ದು, ಇದೇ ಅಧಿಕಾರಿ ಫೇಸ್‌ಬುಕ್ ಅಹವಾಲು ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.
ಇದಕ್ಕೆ ಅರ್ಜಿದಾರರು ತಕರಾರು ಎತ್ತಿದ್ದು ಐವತ್ತು ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎರಡು ಮಹತ್ವದ ಸಾಮಾಜಿಕ ಮಧ್ಯಸ್ಥಿಕೆಗೆ ಸಂಸ್ಥೆಗಳಿಗೆ ಒಬ್ಬರೇ ವ್ಯಕ್ತಿ ಅಹವಾಲು ಅಧಿಕಾರಿಯಾಗಿ ಕೆಲಸ ಮಾಡಲಾಗದು ಎಂದು ಹೇಳಿದ್ದಾರೆ. ಆಗಸ್ಟ್ 16ಕ್ಕೆ ವಿಚಾರಣೆ ಮುಂದೂಡಲಾಗಿದೆ.