ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಆಸ್ಥಾನಾ ಅವರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ಪೀಠ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ನಿಗದಿಪಡಿಸಿದೆ.
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಅರ್ಜಿ ಸಲ್ಲಿಸಿತ್ತು. ಅರ್ಜಿದಾರ ಸಂಸ್ಥೆಯ ಪರವಾಗಿ ಇಂದು ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ನಲ್ಲಿ ಸಿಪಿಐಎಲ್ ಸಲ್ಲಿಸಿದ್ದ ಅರ್ಜಿಯನ್ನು ಈ ಪ್ರಕರಣದಲ್ಲಿ ಯಥಾವತ್ತಾಗಿ ನಕಲು ಮಾಡಿದ್ದಾರೆ. ಇದು ದೆಹಲಿ ಹೈಕೋರ್ಟ್ ನಿಯಮಗಳ ಸಂಪೂರ್ಣ ಉಲ್ಲಂಘನೆ ಎಂದು ಅವರು ವಾದಿಸಿದರು.
ಸುಪ್ರೀಂಕೋರ್ಟ್‌ಗೆ ಭೂಷಣ್ ಅವರು ಸಲ್ಲಿಸಿದ್ದ ಮನವಿಯನ್ನು ನಕಲು ಮಾಡಲಾಗಿದೆಯೇ ಎಂದು ಪೀಠ ಪ್ರಶ್ನಿಸಿದಾಗ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ಪ್ರತಿಕ್ರಿಯಿಸಿದರು.
ಭೂಷಣ್ ಮನವಿಯಿಂದ ನಕಲು ಮಾಡಿದ್ದೀರಾ ಎಂದು ಅರ್ಜಿದಾರರ ಪರ ವಕೀಲರನ್ನು ನ್ಯಾಯಾಲಯ ಕೇಳಿದಾಗ ಅದನ್ನು ಅವರು ನಿರಾಕರಿಸಿದರು. ಇತ್ತ ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು "ಮುದ್ರಣ ದೋಷಗಳು ಸಹ ಒಂದೇ ಆಗಿರುವುದು ಕಾಕತಾಳೀಯ" ಎಂದರು. ಜೊತೆಗೆ ಅರ್ಜಿದಾರರು ಭೂಷಣ್ ಅವರ ಮಾರ್ಗವನ್ನು ಅನುಸರಿಸುತ್ತಿರುವಂತೆ ತೋರುತ್ತದೆ, ಇದು ಅಪಾಯಕಾರಿ ಮಾರ್ಗವಾಗಿದೆ. ಇಬ್ಬರೂ ಮಧ್ಯಪ್ರವೇಶಕಾರರು ಎಂದರು.
ಅಲ್ಲದೆ ಈ ನೇಮಕಾತಿ ಪ್ರಶ್ನಿಸುವುದು ಅರ್ಜಿದಾರರ ವ್ಯವಹಾರವಲ್ಲ. ಮತ್ತೊಬ್ಬ ವೃತ್ತಿಪರ ಪಿಐಎಲ್ ಅರ್ಜಿದಾರರು ನಾಯಾಲಯದಲ್ಲಿ ಹೀಗೆ ಮಾಡುವುದನ್ನು ತಡೆಯೋಣ ಎಂದ ಅವರು ನೇಮಕಾತಿಗಳಿಗೆ ಸವಾಲೊಡ್ಡುವ ಇಂತಹ ಅರ್ಜಿಗಳ ಸ್ಫೂರ್ತಿಯ ಮೂಲ ಯಾವುದು ಎಂಬುದಾಗಿ ಕೇಳಿದರು. ಜೊತೆಗೆ ಅಗತ್ಯ ಸೇವಾ ವಿಷಯಗಳು ಯಾವುವು ಎಂದು ಪ್ರಶ್ನಿಸಿ ಪಿಐಎಲ್ ಸಲ್ಲಿಸುವ ಔಚಿತ್ಯವನ್ನೂ ಅವರು ಆಕ್ಷೇಪಿಸಿದರು.
ಆದರೆ ನ್ಯಾಯಾಲಯ ಮಧ್ಯಸ್ಥಿಕೆ ಅರ್ಜಿಗೆ ಅನುಮತಿ ನೀಡುವ ಜೊತೆಗೆ ಪ್ರಕರಣದಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. ಈ ಮಧ್ಯೆ ಭೂಷಣ್ ಅವರು "ನನ್ನ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ನಾನು ಇಲ್ಲಿ ವಾದಿಸಲು ಬಯಸುವುದಿಲ್ಲ. ಈ ಅರ್ಜಿಯನ್ನು ಅಪೇಕ್ಷಣೀಯ ದಂಡದೊಂದಿಗೆ ವಜಾಗೊಳಿಸಬೇಕು. ಇದು ನ್ಯಾಯಾಲಯದ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತದೆ." ಎಂದರು. ಪ್ರಸ್ತುತ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ತಾನು ಸಲ್ಲಿಸಿರುವ ಅರ್ಜಿಯ ಯಥಾವತ್ತು ನಕಲು ಎಂದು ಭೂಷಣ್ ನಿನ್ನೆ ವಾದಿಸಿದ್ದರು.