Sushant Singh Rajput, Delhi HC
Sushant Singh Rajput, Delhi HC  
ಸುದ್ದಿಗಳು

ಸುಶಾಂತ್ ಜೀವನಾಧಾರಿತ ಚಿತ್ರ ʼನ್ಯಾಯ್ʼ ವೀಕ್ಷಿಸಿದ ದೆಹಲಿ ಹೈಕೋರ್ಟ್: ಪ್ರತಿವಾದಿಗಳಿಂದ ಪ್ರತಿಕ್ರಿಯೆ ಬಯಸಿದ ಪೀಠ

Bar & Bench

ಬಾಲಿವುಡ್‌ ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಬದುಕನ್ನು ಆಧರಿಸಿದ ʼನ್ಯಾಯ್‌: ದಿ ಜಸ್ಟೀಸ್‌ ಚಿತ್ರ ಈ ತಿಂಗಳ ಆರಂಭದಲ್ಲಿ ʼಲಪಾಲಪ್‌ ಒರಿಜಿನಲ್‌ʼ ಎಂಬ ವೇದಿಕೆಯಲ್ಲಿ ಬಿಡುಗಡೆಯಾಗಿದೆ ಎಂದು ಬಹಿರಂಗವಾದ ಬಳಿಕ ದೆಹಲಿ ಹೈಕೋರ್ಟ್‌ ಶುಕ್ರವಾರ ಈ ಸಂಬಂಧ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.

ಚಿತ್ರ ಬಿಡುಗಡೆ ತಡೆಯುವಂತೆ ಕೋರಿದ್ದ ಮನವಿಯನ್ನು ಜೂನ್‌ 10ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸುಶಾಂತ್‌ ತಂದೆ ಕೃಷ್ಣ ಕಿಶೋರ್‌ ಸಿಂಗ್‌ ಹೈಕೋರ್ಟ್‌ ವಿಭಾಗೀಯ ಪೀಠದ ಮೊರೆ ಹೋಗಿದ್ದರು.

ಲಪಾಲಪ್‌ ಜಾಲತಾಣದಲ್ಲಿ ಚಿತ್ರದ ದೃಶ್ಯವಾಳಿಗಳನ್ನು ವೀಕ್ಷಿಸಿದ ಬಳಿಕ ನ್ಯಾಯಮೂರ್ತಿಗಳಾದ ಅನೂಪ್ ಜೈರಾಮ್ ಭಂಭಾನಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ರಜೆಕಾಲೀನ ಪೀಠ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿತು.

“ಲಪಾಲಪ್‌ ಜಾಲತಾಣದಲ್ಲಿ ಸ್ಕ್ರೀನ್‌ ಶೇರಿಂಗ್‌ ಮೂಲಕ ಚಿತ್ರ ವೀಕ್ಷಿಸಲಾಗಿದೆ. ಮೇಲ್ಮನವಿದಾರರ ಪರವಾಗಿ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಅವರು ಆಕ್ಷೇಪಾರ್ಹ ತೀರ್ಪಿನ ವಿವಿಧ ಭಾಗಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮೇಲ್ಮನವಿ ಸಲ್ಲಿಸಿದವರ ಪುತ್ರನ ಜೀನಗಾಥೆಯನ್ನು ವಾಣಿಜ್ಯಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದರಿಂದ ಛಾಯಗ್ರಹಣಗೊಂಡ ಸಿನಿಮಾವನ್ನು ಪರಿಗಣಿಸಲಾಯಿತು. ಕೆ ಎಸ್‌ ಪುಟ್ಟಸ್ವಾಮಿ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣದಂತಹ ವಿವಿಧ ತೀರ್ಪುಗಳಲ್ಲಿ ನೀಡಲಾಗಿರುವ ಆದೇಶವನ್ನು ಏಕಸದಸ್ಯ ಪೀಠ ತಪ್ಪಾಗಿ ಅರ್ಥೈಸಿದೆ ಎಂಬುದಾಗಿ ಸಾಳ್ವೆ ಅವರು ವಾದಿಸಿದ್ದಾರೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿಪಡಿಸಿದೆ.

ರಜಪೂತರ ನಿಧನದ ಬಗೆಗಿನ ಮಾಹಿತಿ ಈಗಾಗಲೇ ಸಾರ್ವಜನಿಕಗೊಂಡಿರುವುದರಿಂದ ಗೌಪ್ಯತೆ ಉಲ್ಲಂಘನೆಯಾಗುವುದಿಲ್ಲ ಎಂದು ಏಕಸದಸ್ಯ ಪೀಠ ತನ್ನ ತೀರ್ಪಿನ ವೇಳೆ ತಿಳಿಸಿತ್ತು. ಅಲ್ಲದೆ ಸಿಆರ್‌ಪಿಸಿ ಆರ್ಡರ್‌ 39ನ್ನು ವಜಾಗೊಳಿಸಲಾಗಿದೆ. ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕಳೆದ ವಾರ ಮೇಲ್ಮನವಿ ವಿಚಾರಣೆಗೆ ಬಂದಾಗ, ಚಿತ್ರ ಈಗಾಗಲೇ ಬಿಡುಗಡೆಯಾಗಿದೆಯೆ ಅಥವಾ ಇಲ್ಲವೇ ಎಂಬ ಬಗ್ಗೆ ನ್ಯಾಯಪೀಠ ಸ್ಪಷ್ಟನೆ ಕೋರಿತ್ತು.

ಚಿತ್ರ ನಿರ್ಮಾಪಕರ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಚಂದರ್‌ ಲಾಲ್‌ ಅವರು ಕಳೆದ ಶುಕ್ರವಾರ ಸಿನಿಮಾವನ್ನು ಲಪಾಲಪ್‌ಒರಿಜಿನಲ್‌ ಜಾಲತಾಣದಲ್ಲಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು. ಚಿತ್ರ 1.2 ಲಕ್ಷ ವೀಕ್ಷಣೆ ಕಂಡಿದೆ ಎಂದರು. ವಿಭಾಗೀಯ ಪೀಠ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದಾಗ ಚಂದರ್‌ ಅವರು ಚಿತ್ರ ತೋರಿಸಿದರು.

ಆಗ ಸುಶಾಂತ್‌ ತಂದೆಯ ಪರ ಹಾಜರಿದ್ದ ವಕೀಲ ಸಾಳ್ವೆ ಅವರು “ಲಪಾಲಪ್‌ ಪ್ರಖ್ಯಾತವಲ್ಲದ ಜಾಲತಾಣವಾಗಿರುವುದರಿಂದ ಹಾನಿ ಗಣನೀಯವಾಗಿ ಸೀಮಿತವಾಗಿದೆ ಎಂದು ನ್ಯಾಯಾಲಯದ ಗಮನ ಸೆಳೆದರು. ಅಲ್ಲದೆ “ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಖ್ಯಾತಿ ಗಳಿಸಿಕೊಂಡಿದ್ದರೆ ಅದು ಆತನ ಜೀವವನ್ನು ಉಳಿಸಲಾರದು ಎಂದು ತೀರ್ಪು ಹೇಳುತ್ತದೆ. ಇದು ಸಂಪೂರ್ಣ ತಪ್ಪು” ಎಂದು ತಿಳಿಸಿದರು. ಪ್ರಸಿದ್ಧ ವ್ಯಕ್ತಿಯ ವ್ಯಕ್ತಿತ್ವವನ್ನು ಅನುಮತಿಸಲಾದ ವಾಣಿಜ್ಯ ಬಳಕೆಗೆ ಸಂಬಂಧಿಸಿದ ಪಂಜಾಬಿ ಗಾಯಕ ಡಲೇರ್‌ ಮೆಹೆಂದಿ ಮತ್ತು ಸೂಪರ್‌ಸ್ಟಾರ್‌ ರಜನೀಕಾಂತ್‌ ಪ್ರಕರಣಗಳನ್ನು ಆಧರಿಸಿ ಸಾಳ್ವೆ ವಾದ ಮಂಡಿಸಿದರು.

ಆದರೆ ನ್ಯಾಯಮೂರ್ತಿ ಭಂಭಾನಿ ಅವರು ಪ್ರಕರಣದ ವಿಚಾರಗಳು ಸುಶಾಂತ್‌ ಬದುಕಿಗೆ ಚಿತ್ರ ಧಕ್ಕೆ ತರುವಂತಿದೆಯೇ ಎಂಬುದರತ್ತ ಹೆಚ್ಚು ಗಮನ ಹರಿಸಿದರು. ಮಾನಹಾನಿಕರವಾಗಿ ಚಿತ್ರದ ವಸ್ತು ಇಲ್ಲ. ನಂತರ ಹಾಗೇನಾದರೂ ಕಂಡುಬಂದರೆ ಅದನ್ನು ಹಾನಿ ಎಂದು ಪರಿಗಣಿಸಿ ಪರಿಹಾರದ ಬಗ್ಗೆ ಕೋರಬಹುದು ಎಂದರು.

ಇದು ಮೇಲ್ಮನವಿಯಾಗಿರುವುದರಿಂದ, ಈ ಹಂತದಲ್ಲಿಮನವಿಗಳ ಪ್ರಶ್ನೆಗೆ ಹೋಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಯಾವುದೇ ಮಧ್ಯಂತರ ಆದೇಶವನ್ನು ನೀಡಲಾಗುವುದಿಲ್ಲ ಬದಲಿಗೆ ಪಕ್ಷಗಳಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಪೀಠ ಅಭಿಪ್ರಾಯಪಟ್ಟಿತು.