Lakshmi Puri and Saket Gokhale 
ಸುದ್ದಿಗಳು

[ಮಾನಹಾನಿ ಪ್ರಕರಣ] ಎರಡು ವಾರಗಳಲ್ಲಿ ಲಕ್ಷ್ಮಿಗೆ ಸಾರ್ವಜನಿಕವಾಗಿ ಕ್ಷಮೆ ಕೋರಿ: ಸಾಕೇತ್‌ಗೆ ದೆಹಲಿ ಹೈಕೋರ್ಟ್ ಆದೇಶ

ಸ್ವಿಟ್ಜರ್‌ಲೆಂಡ್‌ನಲ್ಲಿ ಮನೆ ಖರೀದಿಸಲು ಲಕ್ಷ್ಮಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು 2021ರಲ್ಲಿ, ಗೋಖಲೆ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರು ಮಾನಹಾನಿ ಪ್ರಕರಣ ಹೂಡಿದ್ದರು.

Bar & Bench

ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರನ್ನು 2021ರಲ್ಲಿ ಅವಹೇಳನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳೊಳಗೆ ಸಾರ್ವಜನಿಕವಾಗಿ ಅವರಿಗೆ ಕ್ಷಮೆ ಕೋರುವಂತೆ ದೆಹಲಿ ಹೈಕೋರ್ಟ್‌ ಈಚೆಗೆ ಟಿಎಂಸಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಾಕೇತ್‌ ಗೋಖಲೆ ಅವರಿಗೆ ನಿರ್ದೇಶನ ನೀಡಿದೆ [ಲಕ್ಷ್ಮಿ ಮುರ್ಡೇಶ್ವರ ಪುರಿ ಮತ್ತು ಸಾಕೇತ್ ಗೋಖಲೆ ನಡುವಣ ಪ್ರಕರಣ].

ಗೋಖಲೆ ಅವರ ಟ್ವೀಟ್‌ಗಳು ಮಾನಹಾನಿಕರ ಎಂದು ಕಳೆದ ವರ್ಷ ಹೈಕೋರ್ಟ್ ತೀರ್ಪು ನೀಡಿತ್ತು. ಜೊತೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮತ್ತು ತಮ್ಮ ಎಕ್ಸ್ ಖಾತೆಯಲ್ಲಿ ಕ್ಷಮೆಯಾಚನೆ ಪ್ರಕಟಿಸುವುದರ ಜೊತೆಗೆ ಲಕ್ಷ್ಮಿ ಪುರಿಗೆ ₹50 ಲಕ್ಷ ಪರಿಹಾರ ನೀಡುವಂತೆ ನಿರ್ದೇಶಿಸಿತ್ತು.

ಈ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ಸಾಕೇತ್‌ ಗೋಖಲೆ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ಪುರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ನ 2024ರ ನಿರ್ದೇಶನಗಳ ವಿರುದ್ಧ ಗೋಖಲೆ ಸಲ್ಲಿಸಿದ ಅರ್ಜಿಯನ್ನು ಅಂತಿಮವಾಗಿ ತೀರ್ಮಾನಿಸುವವರೆಗೆ ಮುಚ್ಚಿದ ಲಕೋಟೆಯಲ್ಲಿ ಕ್ಷಮೆಯಾಚಿಸುವುದಾಗಿ ಗೋಖಲೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.

 ಆದರೆ, ನ್ಯಾಯಮೂರ್ತಿ ಅನೀಶ್ ದಯಾಳ್ ಈ ವಿನಂತಿಯನ್ನು ತಿರಸ್ಕರಿಸಿದ್ದಾರೆ ಮತ್ತು ಎರಡು ವಾರಗಳಲ್ಲಿ ಕ್ಷಮೆಯಾಚನೆಯನ್ನು ಪ್ರಕಟಿಸುವಂತೆ ಗೋಖಲೆ ಅವರಿಗೆ ನಿರ್ದೇಶಿಸಿದ್ದಾರೆ.

ಗೋಖಲೆ ವೃಥಾ ತಡ, ಕಾಲಹರಣ ಹಾಗೂ ವಿಳಂಬ ಮಾಡುತ್ತಿದ್ದಾರೆ. ಅವರು ಈಗಲೂ ತೀರ್ಪನ್ನು ಪಾಲಿಸಿಲ್ಲ ಎಂದು ಅವರು ಹೇಳಿದರು.

ಲಕ್ಷ್ಮಿ ಪುರಿ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ. 2021ರಲ್ಲಿ, ಅವರು ಸ್ವಿಟ್ಜರ್‌ಲೆಂಡ್‌ನಲ್ಲಿ ಅಕ್ರಮ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ಗೋಖಲೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು.