Shyam Meera Singh, Sadhguru with Delhi HC Facebook
ಸುದ್ದಿಗಳು

ಈಶ ಪ್ರತಿಷ್ಠಾನ, ಜಗ್ಗಿ ವಾಸುದೇವ್ ವಿರುದ್ಧದ ವಿಡಿಯೋ ತೆಗೆದುಹಾಕಲು ಯೂಟ್ಯೂಬರ್‌ಗೆ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ

ಈಶ ಪ್ರತಿಷ್ಠಾನ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರು ಮಧ್ಯಂತರ ಆದೇಶ ಹೊರಡಿಸಿದ್ದಾರೆ.

Bar & Bench

ಈಶ ಪ್ರತಿಷ್ಠಾನ ಮತ್ತು ಅದರ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಸಂಬಂಧಿಸಿದಂತೆ ಪತ್ರಕರ್ತ ಮತ್ತು ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್ ಅವರು ಪ್ರಸಾರ ಮಾಡಿದ್ದ “ಬಯಲಾದ ಸದ್ಗುರು: ಜಗ್ಗಿ ವಾಸುದೇವ್ ಆಶ್ರಮದಲ್ಲಿ ಏನಾಗುತ್ತಿದೆ?" ಹೆಸರಿನ ವಿಡಿಯೋ ತೆಗೆದುಹಾಕುವಂತೆ ಗೂಗಲ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್ ಮತ್ತು ಮೆಟಾಗೆ ದೆಹಲಿ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಈಶ ಪ್ರತಿಷ್ಠಾನ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರು ಮಧ್ಯಂತರ ಆದೇಶ  ಹೊರಡಿಸಿದ್ದಾರೆ.

ಈ ವಿಚಾರವಾಗಿ  ಇನ್ನು ಮುಂದೆ ವಿಡಿಯೋ ಪ್ರಸಾರ ಮಾಡಬಾರದು ಎಂದು ಕೂಡ ನ್ಯಾ. ಪ್ರಸಾದ್‌ ಆದೇಶಿಸಿದ್ದಾರೆ. "ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಸಾರ್ವಜನಿಕರು ಆ ವಿಡಿಯೋವನ್ನು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡುವುದನ್ನು ನಿರ್ಬಂಧಿಸಲಾಗಿದೆ " ಎಂದು ಅದು ವಿವರಿಸಿದೆ.

ಮಾಹಿತಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡದೆ ಸಂಪೂರ್ಣವಾಗಿ ಪರಿಶೀಲಿಸದ ವಿಷಯಕ್ಕೆ ಸಂಬಂಧಿಸಿದಂತೆ ಸಿಂಗ್‌ ವಿಡಿಯೋ ಮಾಡಿದ್ದಾರೆ ಎಂದು ನ್ಯಾಯಾಲಯ ಪ್ರಾಥಮಿಕವಾಗಿ ತೀರ್ಪು ನೀಡಿತು.

ವೀಕ್ಷಕರ ಗಮನ ಸೆಳೆಯುವ ಸಲುವಾಗಿ ಅಂತಹ ರೋಚಕ ಶೀರ್ಷಿಕೆಯಿರುವ ವಿಡಿಯೋ ಪ್ರಸಾರ ಮಾಡಲಾಗಿದೆ ಎಂದಿರುವ ನ್ಯಾಯಾಲಯ ಈ ವಿಡಿಯೋದ ನಿರಂತರ ಪ್ರಸಾರ ಈಶ ಪ್ರತಿಷ್ಠಾನದ ವರ್ಚಸ್ಸಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ತಿಳಿಸಿತು.

"ಪ್ರತಿವಾದಿ ಶ್ಯಾಮ್ ಮೀರಾ ಸಿಂಗ್ ಫೆಬ್ರವರಿ 19ರಂದು ಅರ್ಜಿದಾರರಿಗೆ ಇಮೇಲ್ ಬರೆದು, ತಾನು ಯೂಟ್ಯೂಬ್ ಪತ್ರಕರ್ತನಾಗಿದ್ದು, ಸದ್ಗುರುಗಳು ಅಪ್ರಾಪ್ತ ಬಾಲಕಿಯರಿಗೆ ಮೇಲುಡುಗೆಯನ್ನು ಬಿಚ್ಚುವಂತೆ ಹೇಳಿದ್ದಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡುವ ಉದ್ದೇಶ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. ಆರೋಪಗಳ ಬಗ್ಗೆ ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ " ಎಂದು ಈಶ ಪ್ರತಿಷ್ಠಾನ ಪ್ರತಿನಿಧಿಸುವ ಹಿರಿಯ ವಕೀಲ ಮಾಣಿಕ್ ಡೋಗ್ರಾ ಇಂದು ನ್ಯಾಯಾಲಯಕ್ಕೆ ತಿಳಿಸಿದರು.

ಕಳೆದ ತಿಂಗಳು ಮಹಾಶಿವರಾತ್ರಿಗೆ ಕೇವಲ ಎರಡು ದಿನಗಳ ಮೊದಲು ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಯೋಜನಾಬದ್ಧವಾಗಿ ಬಿಡುಗಡೆಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಕೊಯಮತ್ತೂರಿನಲ್ಲಿ ನಡೆದ ಈಶ ಫೌಂಡೇಶನ್‌ನ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರ ಬಗ್ಗೆ ಸಾರ್ವಜನಿಕ ಕೋಲಾಹಲ ಸೃಷ್ಟಿಸಲು ಈ ರೀತಿ ಮಾಡಲಾಗಿದೆ. ಸಮಸ್ಯಾತ್ಮಕವಲ್ಲದ ವಿಷಯವನ್ನು ಸಿಂಗ್ ಅವರು ರೋಚಕಗೊಳಿಸಿದ್ದಾರೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಪ್ರಕರಣದ ಮುಂದಿನ ವಿಚಾರಣೆ ಮೇ 09ರಂದು ನಡೆಯಲಿದೆ.